ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕಾದರೆ ಭಗವಂತನ ಶರಣಾಗತಿಯಿಂದ ಮಾತ್ರ ಸಾಧ್ಯ-ಸ್ವಾಮಿ ಅಪರಾಜಿತಾನಂದ

ಮೂಲ್ಕಿ: ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕಾದರೆ ಭಗವಂತನ ಶರಣಾಗತಿಯಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಚಿನ್ಮಯ ಮಿಷನ್‍ನ ಆಚಾರ್ಯರಾದ ಸ್ವಾಮಿ ಅಪರಾಜಿತಾನಂದ ಹೇಳಿದರು.
ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಭಾನುವಾರ ಸಂಜೆ ಮಂಗಳೂರು ಚಿನ್ಮಯ ಮಿಷನ್ ಮತ್ತು ಮೂಲ್ಕಿಯ ಮಯೂರಿ ಫೌಂಡೇಶನ್ ವತಿಯಿಂದ ನಡೆದ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮಿ ಅಪರಾಜಿತಾನಂದ ಆಶೀರ್ವಚಿಸಿದರು.

ಜೀವನದಲ್ಲಿ ನಾನಾ ರೀತಿಯ ಕಷ್ಟ,ನೋವು,ತೊಂದರೆಗಳು ಬರುತ್ತವೆ.ಆದರೆ ಸಮಸ್ಯೆಗಳಿಗೆಲ್ಲಾ ಉತ್ತಮ ಪರಿಹಾರ ಸಿಗಬೇಕಾದರೆ ನಾವು ಭಗವಂತನ ಹತ್ತಿರ ಹೋಗಬೇಕು.ಭಗವಂತನು ಸಮಸ್ತ ಜಗತ್ತಿಗೇ ತಂದೆ ತಾಯಿ.ನಮಗೆ ಯಾವುದು ಒಳ್ಳೆಯದೋ ಅದು ಮಾತ್ರ ಅವನು ನೀಡಿತ್ತಾನೆ.ಮತ್ತೆ ಮತ್ತೆ ಭಗವಂತನ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತಮ ಪರಿಹಾರ ಸಿಗುವಾಗ ಭಗವಂತನ ಮೇಲೆ ಇರುವ ನಂಬಿಕೆ,ವಿಶ್ವಾಸ,ಶ್ರದ್ಧೆ,ಭಕ್ತಿ ಎಲ್ಲವೂ ಹೆಚ್ಚಾಗುತ್ತದೆ.ಭಗವಂತನ ಸಂಬಂಧವೂ ಬೆಳೆಯುತ್ತದೆ.ಇದು ಭಗವದ್ಗೀತೆಯ ಸರಳವಾದ ಸಂದೇಶ ಎಂದವರು ಹೇಳಿದರು.

ಬಳಿಕ ಅವರು “ನಮೇ ಭಕ್ತಃ ಪ್ರಣಶ್ಯುತಿ(ನನ್ನ ಭಕ್ತರಿಗೆ ನಾಶವಿಲ್ಲ) ವಿಷಯದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಯೂರಿ ಫೌಂಡೇಶನ್ ಸ್ಥಾಪಕಾಧ್ಯಕ್ಷ ಜಯ ಕೆ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು.ಕಳದ 3 ವರ್ಷಗಳಿಂದ ಮಯೂರಿ ಫೌಂಡೇಶನ್ ಮೂಲ್ಕಿ ಪರಿಸರದಲ್ಲಿ ಸಾಮಾಜಿಕ,ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ನೂರಾರು ಸೇವೆಗಳನ್ನು ಯಶಸ್ವಿಯಾಗಿ ನಡೆಸಿದ್ದು,ಮುಂದೆ ನಿರಂತರ ಸಮಾಜ ಸೇವೆಗಳು ನಡೆಯಲಿದೆ ಎಂದವರು ಹೇಳಿದರು.

ಶಾಸಕ ಉಮನಾಥ ಕೋಟ್ಯಾನ್, ಬಪ್ಪನಾಡು ದೇವಳದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಹೊಸ ಅಂಗಣ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಹರಿಶ್ಚಂದ್ರ ಪಿ.ಸಾಲ್ಯಾನ್,ಮಯೂರಿ ಫೌಂಡೇಶನ್ ಸಂಸ್ಥಾಪಕಿ ಶಶಿಕಲಾ ಜಯ ಶೆಟ್ಟಿ,ಫೌಂಡೇಶನ್ ಟ್ರಸ್ಟಿಗಳಾದ ರಾಜೇಶ್ ಶೆಟ್ಟಿ,ದೇವಪ್ರಸಾದ್ ಪುನರೂರು,ಜೀವನ್ ಕೆ.ಶೆಟ್ಟಿ,ಪ್ರಬೋಧ್ ಕುಡ್ವ,ನವೀನ್ ಶೆಟ್ಟಿ ಹಾಗೂ ಸಮಿತಿ ಸದಸ್ಯರಾದ ಹರೀಶ್ ದೇವಾಡಿಗ,ಗಿರೀಶ್ ಒಡೆಯರಬೆಟ್ಟು ಉಪಸ್ಥಿತರಿದ್ದರು.

ಪ್ರಾಣೇಶ್ ಭಟ್ ದೇಂದಡ್ಕ ಕಾರ್ಯಕ್ರಮ ನಿರ್ವಹಿಸಿ,ನವೀನ್ ಶೆಟ್ಟಿ ವಂದಿಸಿದರು.

ಇದಕ್ಕೆ ಮುನ್ನ ಮುದ್ರಾಡಿ ನಮ ತುಳುವೆರ್ ಕಲಾ ತಂಡದಿಂದ “ಪಟ್ಟೆ ತತ್ತ್‍ಂಡಾ” ತುಳು ನಾಟಕ ಪ್ರದರ್ಶನ ನಡೆಯಿತು.