ಗ್ರಾಮ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ,ಕುಡಿಯುವ ನೀರು,ಹೆದ್ದಾರಿ ಸಿಗ್ನಲ್ ಲೈಟ್ ಸಮಸ್ಯೆಗಳನ್ನು ತೆರೆದಿಟ್ಟ ಮಕ್ಕಳು

ಪಡುಬಿದ್ರಿ: ಪಡುಬಿದ್ರಿ ಗ್ರಾಪಂ ವತಿಯಿಂದ ಬುಧವಾರ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳು ತ್ಯಾಜ್ಯ ವಿಲೇವಾರಿ,ಕುಡಿಯುವ ನೀರಿನ ಸಮಸ್ಯೆ,ಹೆದ್ದಾರಿ ಸಿಗ್ನಲ್ ಲೈಟ್ ಇತ್ಯಾದಿ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ಬೋರ್ಡ್ ಶಾಲಾ ವಿದ್ಯಾರ್ಥಿನಿ ನಿರ್ಮಲಾ ಎಂಬಾಕೆ,ಮಾರುಕಟ್ಟೆ ಸಮೀಪವಿರುವ ಶಾಲಾ ಜಗುಲಿಯಲ್ಲಿ ರಾತ್ರಿ ವೇಳೆ ಕುಡುಕರು ಬಂದು ಮಲಗಿ ಅಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಾರೆ.ಈ ಬಗ್ಗೆ ಗ್ರಾಪಂ ಕ್ರಮ ಕೈಗೊಂಡು ಶಾಲಾ ಆವರಣ ಗೋಡೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ,ಈ ಬಗ್ಗೆ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದ್ದು,ಉದ್ಯೋಗ ಖಾತರಿ ಯೋಜನೆಯಿಂದ ಕಾರ್ಮಿಕರ ಕೊರತೆ ಕಂಡುಬಂದಿದೆ.ಆದಾಗ್ಯೂ 2 ವರ್ಷದೊಳಗೆ ಆವರಣ ಗೋಡೆ ನಿರ್ಮಿಸಲಾಗುವುದು ಎಂದರು.ರಾತ್ರಿ ವೇಳೆ ಪೋಲೀಸ್ ಬೀಟ್‍ಗೆ ಮನವಿ ಮಾಡುವುದಾಗಿಯೂ ತಿಳಿಸಿದರು.

ಕಂಚಿನಡ್ಕ ಶಾಲಾ ಸುತ್ತ ಕಸ ತ್ಯಾಜ್ಯ ತುಂಬಿ ದುರ್ವಾಸನೆ ಬರುತ್ತಿದೆ ಎಂದು ಅಲ್ಲಿನ ಸರಕಾರಿ ಶಾಲ ವಿದ್ಯಾರ್ಥಿ ಮುಝೈದ್ ಹೇಳಿ,ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.ಈ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ಪಂಚಾಕ್ಷರಿ ಹೇಳಿದರು.
ಬೋಡ ಶಾಲೆಯಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು,ಗ್ರಾಪಂ ನೀರು ಪೂರೈಸುವಂತೆ ನಂದಿನ ಎಂಬಾಕೆ ಅವಲತ್ತುಕೊಂಡರು.ಶಾಸಕ ಲಾಲಾಜಿ ಮೆಂಡನ್ ಈಗಾಗಲೇ ಅಲ್ಲಿಗೊಂದು ಕೊಳವೆ ಬಾವಿ ಮಂಜೂರು ಮಾಡಿದ್ದು,15 ದಿನದೊಳಗೆ ಸಮಸ್ಯೆ ನಿವಾರಿಸಲಾಗುವುದು ಎಂದು ತಿಳಿಸಲಾಯಿತು.

ಬಸ್ ನಿಲ್ದಾಣ ಬಳಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ತ್ರಾಸದಾಯಕವಾಗುತ್ತಿದ್ದು,ಅಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ಎಸ್‍ಬಿವಿಪಿ ಶಾಲೆಯ ಸೀತಮ್ಮ ಮನವಿ ಮಾಡಿದರು.ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಪ್ರತಿಕ್ರಿಯಿಸಿ,ಈ ಬಗ್ಗೆ ಈಗಾಗಲೇ ಎನ್‍ಎಚ್‍ಎ ಮತ್ತು ನವಯುಗ್ ಕಂಪನಿಗೆ ಗ್ರಾಪಂ ವತಿಯಿಂದ ಮನವಿ ಮಾಡಲಾಗಿದೆ ಎಂದರು.

ಬೀಚ್ ಬಳಿಯ ಕಾಮಿನಿ ಹೊಳೆಯಲ್ಲಿ ಸ್ಥಳೀಯರು ಹಾಗೂ ಹೊರಗಿನವರು ವಾಹನದಲ್ಲಿ ಬಂದು ತ್ಯಾಜ್ಯಗಳನ್ನು ಸುರಿಯುತ್ತಿದ್ದು,ಹೊಳೆ ತುಂಬಾ ದುರ್ವಾಸನೆ ಬರುತ್ತಿದೆ ಎಂದು ಸಾಗರ್ ವಿದ್ಯಾ ಮಂದಿರ ಶಾಲೆಯ ಚಿನ್ಮಯ ಹೇಳಿದರು.ಇದನ್ನು ಗಂಭೀರವಾಗಿ ಪರಿಗಣಿಸಿ ಸುತ್ತಲಿನ ಮನೆಯವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಪಿಡಿಒ ಹೇಳಿದರು.
ಮೈದಾನದಲ್ಲಿ ಆಟವಾಡುವಾಗ ಪಕ್ಕದ ರಸ್ತೆಯಲ್ಲಿ ವಾಹನಗಳು ಕರ್ಕಶ ಹಾರ್ನ್ ಹಾಕಿ ಅತೀ ವೇಗವಾಗಿ ಸಂಚರಿಸುತ್ತಿರುವ ಬಗ್ಗೆ ಉರ್ದು ಶಾಲಾ ಹಬೀಬುಲ್ ರೆಹಮಾನ್ ಹೇಳಿದರು.ಈ ಬಗ್ಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸುವ ಭರವಸೆ ದೊರೆಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮಾತನಾಡಿ,ಮಕ್ಕಳ ದೌರ್ಜನ್ಯ ಸಂದರ್ಭ ಮಕ್ಕಳು ತಕ್ಷಣ ಮನೆಯವರಿಗೆ ಮತ್ತು ಶಾಲೆಗೆ ಮಾಹಿತಿ ನೀಡಬೇಕೆಂದು ಹೇಳಿ,ಈ ಬಗ್ಗೆ ಗ್ರಾಪಂ ಆಡಳಿತ ಸದಾ ಸ್ಪಂದಿಸುತ್ತದೆ ಎಂದರು.
ತಾಪಂ ಸದಸ್ಯ ದಿನೇಶ್ ಕೋಟ್ಯಾನ್ ಮಾತನಾಡಿ,ಪಡುಬಿದ್ರಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಗೊಂಡಿದ್ದು,ಈ ಬಗ್ಗೆ ಶಾಲೆಗಳಿಗೆ ತೆರಳಿ ಸೂಕ್ತ ಮಾಹಿತಿ ನೀಡಬೇಕೆಂದರು.ತಾಪಂ ಸದಸ್ಯೆ ನೀತಾ ಗುರುರಾಜ್ ಮಾತನಾಡಿ,ಸ್ವಯಂ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡಲು ಮಕ್ಕಳಿಗೆ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಶಕುಂತಳಾ,ಆರೋಗ್ಯ ಇಲಾಖಾ ವತಿಯಿಂದ ಆರೋಗ್ಯ ಸಹಾಯಕಿ ರೇವತಿ,ಪೋಲೀಸ್ ಇಲಾಖಾ ವತಿಯಿಂದ ಅನಿತಾರವರು ಇಲಾಖಾ ಮಾಹಿತಿ ನೀಡಿದರು.
ಇದೇ ಸಂದರ್ಭ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಂಘ ಸಂಸ್ಥೆಗಳು,ಮಹಿಳೆಯರು,ಹಾಗೂ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ಜ.18ರ ಒಳಗೆ ಅರ್ಜಿ ಸಲ್ಲಿಸುವಂತೆ ಪಂಚಾಕ್ಷರಿ ಸ್ವಾಮಿ ಮಾಹಿತಿ ನೀಡಿದರು.ಮಹಿಳಾ ದಿನಾಚರಣೆಯಂದು ಈ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದವರು ಹೇಳಿದರು.

ಕಾಪು ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ದಯಾನಂದ ಪೈ ನೋಡಲ್ ಅಧಿಕಾರಿಯಾಗಿದ್ದು,ಎಸ್‍ಬಿವಿಪಿ ಶಾಲೆಯ ಭೂಮಿಕಾ ಅಧ್ಯಕ್ಷತೆ ವಹಿಸಿದ್ದರು.

ಎಸ್‍ಬಿವಿಪಿ ಶಾಲಾ ವಿದ್ಯಾರ್ಥಿ ನಾಯಕ ವಿಘ್ನೇಶ್,ಸಾಗರ್ ವಿದ್ಯಾ ಮಂದಿರ ಶಾಲೆಯ ಪಾವನಾ ಮತ್ತು ಕೀರ್ತನ್,ಬೋರ್ಡ್ ಶಾಲೆಯ ವಿಠಲ,ಗ್ರಾಪಂ ಸದಸ್ಯರು ವೇದಿಕೆಯಲ್ಲಿದ್ದರು.

ಪಂಚಾಕ್ಷರಿ ಸ್ವಾಮಿ ಕೆರಿಮಠ ಸಾಗತಿಸಿ ವಂದಿಸಿದರು.