ಗ್ರಾಮಾಭಿವೃದ್ಧಿಗೆ ಗ್ರಾಮಸ್ಥರ ಸಹಭಾಗಿತ್ವ ಅತ್ಯಗತ್ಯ-ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ಗ್ರಾಮವು ಸರ್ವಾಂಗೀಣವಾಗಿ ಅಭಿವೃದ್ಧಿ ಪಥದತ್ತ ಸಾಗುವಂತಾಗಲು ಗ್ರಾಮಸ್ಥರ ಸಹಭಾಗಿತ್ವ ಅತ್ಯಗತ್ಯವಾದುದು ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಹೆಜಮಾಡಿಯ ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ವತಿಯಿಂದ ಭಾನುವಾರ ಮಟ್ಟು ಮೊಗವೀರ ಸಭಾ ಆಡಳಿತದ ಶ್ರೀ ಪಾಂಡುರಂಗ ಭಜನಾ ಮಂದಿರದ ಸಭಾಭವನದಲ್ಲಿ ಹಮ್ಮಿಕೊಂಡ ವನಮಹೋತ್ಸವ ಮತ್ತು ಉಪಯುಕ್ತ ಸಸಿ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್ ಮಾತನಾಡಿ, ಗ್ರಾಪಂ ವತಿಯಿಂದ ಎಸ್‍ಎಲ್‍ಆರ್‍ಎಮ್ ಘಟಕ ಆರಂಭಿಸಲಾಗಿದ್ದು, ಗ್ರಾಮಸ್ಥರ ನೀರಸ ಪ್ರತಿಕ್ರಿಯೆಯಿಂದ ಯೋಜನೆ ಮಂದ ಗತಿಯಲ್ಲಿ ಸಾಗುತ್ತಿದೆ. 2000 ಮನೆಗಳ ಪೈಕಿ ಕೇವಲ 464 ಮನೆಗಳವರು ಕಸವನ್ನು ವಿಂಗಡಿಸಿ ಕೊಡುತ್ತಿದ್ದಾರೆ. ಸ್ಥಳೀಯರು ಈ ಬಗ್ಗೆ ಆಸಕ್ತಿ ವಹಿಸಿ ಕಸಗಳನ್ನು ವಿಂಗಡಿಸಿ ನೀಡುವ ಮೂಲಕ ಸ್ವಚ್ಛ ಗ್ರಾಮ ಯೋಜನೆಗೆ ಸಹಕರಿಸಬೇಕು ಎಂದರು.
ಪತ್ರಕರ್ತ ಹರೀಶ್ ಹೆಜ್ಮಾಡಿ ಮಾತನಾಡಿ, ನಮ್ಮ ಚಿಂತನೆಗಳು ವಿಕಸಿತವಾಗಿರಬೇಕು. ಗಿಡಗಳನ್ನು ನೆಡುವ ಸಂದರ್ಭ ಅವುಗಳು ಫಲ ನೀಡುವ ಸಂದರ್ಭ ದೊಡ್ಡದಾಗುವಷ್ಟು ಸ್ಥಳಾವಕಾಶವನ್ನು ಕಲ್ಪಿಸಿಕೊಂಡು ಗಿಡಗಳನ್ನು ನೆಟ್ಟಲ್ಲಿ ಉತ್ತಮ ಹಾಗೂ ಬೇಗ ಫಲ ಪಡೆಯಲು ಸಾಧ್ಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಸದಸ್ಯ ಪ್ರಾಣೇಶ್ ಹೆಜ್ಮಾಡಿ ಸಾಂದರ್ಭಿಕ ಮಾತನಾಡಿದರು.
ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ಅಧ್ಯಕ್ಷ ಲೋಹಿತಾಕ್ಷ ಎ.ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃಂದವು ಕಳೆದ ಹಲವಾರು ವರ್ಷಗಳಿಂದ ಗ್ರಾಮಾಭಿವೃದ್ಧಿಗೆ ಪೂರಕವಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರಕಾರವು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭ ಉಪಯುಕ್ತ ಗಿಡಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಬಳಿಕ ಸ್ಥಳಾವಕಾಶವಿದ್ದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಪಾಂಡುರಂಗ ಭಜನಾ ಮಂದಿರದ ಪ್ರಧಾನ ಅರ್ಚಕ ವಿಜಯ ಕೆ.ಕೋಟ್ಯಾನ್, ಮಟ್ಟು ಮೊಗವೀರ ಮಹಾಸಭಾದ ಗೌರವಾಧ್ಯಕ್ಷ ನಾರಾಯಣ ಕೆ.ಮೆಂಡನ್, ಅಧ್ಯಕ್ಷ ಧನಂಜಯ ಡಿ.ಪುತ್ರನ್, ಮಹಿಳಾ ಸಭಾ ಅಧ್ಯಕ್ಷೆ ಪುಷ್ಪಾವತಿ ವಿ.ಮೆಂಡನ್, ಯುವತಿ ವೃಂದದ ಅಧ್ಯಕ್ಷೆ ರೇಷ್ಮಾ ಶಂಕರ್, ನೀಲಯ್ಯ ಗುರಿಕಾರ ಉಪಸ್ಥಿತರಿದ್ದರು.

ಪವಿತ್ರಾ ಗಿರೀಶ್ ಸ್ವಾಗತಿಸಿದರು. ಶರಣ್‍ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಲಿಖಿತ್ ಜಿ.ಕರ್ಕೇರ ವಂದಿಸಿದರು.