ಗುರು ಹಿರಿಯರ ಮತ್ತು ದೇವರ ಆಶೀರ್ವಾದದಿಂದ ಯಾವುದೇ ಜಟಿಲ ಕಾರ್ಯ ಸುಲಲಿತ-ಡಾ ಎಮ್ ಎನ್ ರಾಜೇಂದ್ರ ಕುಮಾರ್

ಪಡುಬಿದ್ರಿ ಬಂಟರ ಸಂಘದ ಸೋಶಿಯಲ್ ವೆಲ್‍ಫೇರ್ ಪ್ರೋಗ್ರಾಮ್ ಮತ್ತು ವಿದ್ಯಾರ್ಥಿವೇತನ ವಿತರಣೆ

ಪಡುಬಿದ್ರಿ: ಗುರು ಹಿರಿಯರ ಮತ್ತು ದೇವರ ಆಶೀರ್ವಾದದಿಂದ ಯಾವುದೇ ಜಟಿಲ ಕಾರ್ಯ ಸಾಂಗವಾಗಿ ನೆರವೇರುತ್ತದೆ. ಸಮಾಜದಿಂದ ಪಡೆದದ್ದನ್ನು ಹತ್ತು ಪಟ್ಟು ಸಮಾಜಕ್ಕೆ ಹಿಂದಿರುಗಿಸಿದರೇ ಅದೇ ಅತ್ಯುತ್ತಮ ಜೀವನ ಎಂದು ರಾಜ್ಯ ಸಹಕಾರಿ ಮಾರಾಟ ಮಹಾಮಂಡಲದ ಅಧ್ಯಕ್ಷ ಹಾಗೂ ಮಂಗಳೂರು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಪಡುಬಿದ್ರಿ ಬಂಟರ ಭವನದಲ್ಲಿ ಭಾನುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಬಂಟರ ಯಾನೆ ನಾಡವರ ಮಾತೃ ಸಂಘ ಸಹಕಾರದೊಂದಿಗೆ ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿ ನಿಧಿಯ ಪ್ರಾಯೋಜಕತ್ವದಲ್ಲಿ ನಡೆದ ಸೋಶಿಯಲ್ ವೆಲ್‍ಫೇರ್ ಪ್ರೋಗ್ರಾಮ್ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟರ ಸಂಘದ ಸಾಮಾಜಿಕ ಕಾರ್ಯಕ್ರಮಗಳಿಗೆ ಬೇಕಾದ ಸಹಾಯ ಹಸ್ತ ನೀಡುವುದಾಗಿ ಈ ಸಂದರ್ಭ ಅವರು ಭರವಸೆ ನೀಡಿದರು.
ಇದೇ ಸಂದರ್ಭ ಅವರು ವಿಶೇಷ ಚೇತನ ವೇತನ ವಿತರಿಸಿದರು. ಬಂಟ ಸಮಾಜದ ಸುಮಾರು 30 ಅರ್ಹರಿಗೆ ವಿಶೇಷ ಚೇತನ ವೇತನ ವಿತರಿಸಲಾಯಿತು. ಈ ಪೈಕಿ ಪಡುಬಿದ್ರಿ ಸಂಘದ ಮನವಿಗೆ ಸ್ಪಂದಿಸಿ ಬಂಟರ ಮಾತೃ ಸಂಘ 8 ವಿಶೇಷ ಚೇತನರಿಗೆ ಮಾಶಾಸನ ನೀಡಲಿದೆ ಎಂದು ಘೋಷಿಸಲಾಯಿತು.

ಸನ್ಮಾನ: ಇದೇ ಸಂದರ್ಭ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ನಿವೃತ್ತ ಕಸ್ಟಮ್ಸ್ ಮೇಲಾಧಿಕಾರಿ ರಘು ಎಲ್.ಶೆಟ್ಟಿ ಮತ್ತು ಸಿರಿಮುಡಿ ದತ್ತಿನಿಧಿ ಸಂಸ್ಥಾಪಕ ಹಾಗೂ ಪಡುಬಿದ್ರಿ ಮತ್ತು ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ರಘು ಎಲ್.ಶೆಟ್ಟಿಯವರು ವಿಧವಾ ವೇತನ ವಿತರಿಸಿ ಶುಭ ಹಾರೈಸಿದರು.

ಸಿರಿಮುಡಿ ದತ್ತಿ ನಿಧಿ: ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ಸಾಂತೂರು ಭಾಸ್ಕರ ಶೆಟ್ಟಿಯವರು ಸ್ಥಾಪಿಸಿದ ಸಿರಿಮುಡಿ ದತ್ತಿನಿಧಿಗೆ ತಾವೇ ಮುಂದೆ ನಿಂತು ರೂ.75 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ. ಇನ್ನೂ ರೂ.25 ಲಕ್ಷ ಸಂಗ್ರಹಿಸುವ ಗುರಿ ಹೊಂದಿದ್ದು, ಈ ಬಾರಿ ಸುಮಾರು 420 ಕ್ಕೂ ಅಧಿಕ ಮಂದಿಗೆ ದತ್ತಿನಿಧಿ ವತಿಯಿಂದ ರೂ.10ಲಕ್ಷಕ್ಕೂ ಅಧಿಕ ವಿದ್ಯಾರ್ಥಿವೇತನ, ವಿಧವಾ ವೇತನ, ವಿಶೇಷ ಚೇತನ ವೇತನಗಳನ್ನು ವಿತರಿಸಲಾಯಿತು. ಸಂಘದ ವತಿಯಿಂದ ಅವರನ್ನು ಗೌರವಿಸಿದ ಸಂದರ್ಭ ಭಾವುಕರಾದ ಅವರು ದತ್ತಿನಿಧಿ ಸಂಗ್ರಹ ಸಂದರ್ಭ ಸಂಪೂರ್ಣ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಈ ಗೌರವ ಸಮರ್ಪಣೆ ಎಂದರು.

ಎಮ್‍ಆರ್‍ಜಿ ಗ್ರೂಪ್ಸ್ ಸಿಎಮ್‍ಡಿ ಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಡುಬಿದ್ರಿ ಬಂಟರ ಸಂಘದ ಸಭಾಭವನವನ್ನು ಹವಾನಿಯಂತ್ರಿತಗೊಳಿಸುವ ಯೋಜನೆಯನ್ನು ತಾನೇ ಸ್ವಯಂ ನಿರ್ವಹಿಸುವ ಭರವಸೆ ನೀಡಿದರು. ಅಲ್ಲದೆ ಸಿರಿ ಮುಡಿ ದತ್ತಿನಿಧಿ ಪ್ರತಿ ವರ್ಷ ವಿತರಿಸುವ ವಿವಿಧ ವೇತನಗಳಿಗೆ ಪ್ರತಿ ವರ್ಷ ರೂ.8 ಲಕ್ಷ ನೀಡುವುದಾಗಿ ಘೋಷಿಸಿದರು.

ಮನೆ ನಿರ್ಮಾಣಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಹಕಾರ: ಇದೇ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಮಾಜದ ಅರ್ಹ ಇಬ್ಬರು ಫಲಾನುಭವಿಗಳ ಮನೆ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ತಲಾ ರೂ.2 ಲಕ್ಷ ಅನುದಾನ ವಿತರಿಸಿ, ಈಗಾಗಲೇ ಸಮಾಜದ 67 ಕುಟುಂಬಗಳ ಮನೆ ನಿರ್ಮಾಣಕ್ಕೆ ತಲಾ ರೂ.2 ಲಕ್ಷ ನೀಡಲಾಗಿದೆ. ಶೀಘ್ರವೇ ಮತ್ತೆ 33 ಮನೆಗಳಿಗೆ ಅನುದಾನ ನೀಡಲು ಒಕ್ಕೂಟ ನಿರ್ಧರಿಸಿದೆ ಎಂದರು.
ಮುಂಬೈ ಪ್ರುಡೆನ್ಶಿಯಲ್ ಟ್ರಾವೆಲ್ಸ್‍ನ ಎಮ್‍ಡಿ ಹುಂತ್ರಿಕೆ ಸುಧಾಕರ ಶೆಟ್ಟಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಿ ಶುಭ ಹಾರೈಸಿದರು.
ಚಲನಚಿತ್ರ ನಟ ಗುರು ನಂದನ್, ಮುಲುಂಡ್ ಬಂಟರ ಸಂಘದ ಅಧ್ಯಕ್ಷ ಪಲಿಮಾರು ವಸಂತ ಎನ್.ಶೆಟ್ಟಿ, ಪಡುಬಿದ್ರಿ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ್ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಬಂಟ್ಸ್ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಇದಕ್ಕೆ ಮುನ್ನ ಮಂಗಳೂರು ತೇಜಸ್ವಿನಿ ಆಸ್ಪತ್ರೆಯ ಎಮ್‍ಡಿ ಡಾ.ಅಜಿತ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಗೌರವ ಕಾರ್ಯದರ್ಶಿ ವಸಂತ ಶೆಟ್ಟಿ ಉಪಸ್ಥಿತರಿದ್ದರು.

ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಾಯಿನಾಥ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರ್ವಹಿಸಿದರು.ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

ಈ ಸಂದರ್ಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರ ಪ್ರದರ್ಶನ, ಮಹಿಳಾ ವಿಭಾಗದ ಸದಸ್ಯೆಯರಿಂದ ಸಾಂಸ್ಕøತಿಕ ಕಾರ್ಯಕ್ರಮ, ದೇವದಾಸ್ ಕಾಪಿಕಾಡ್ ತಂಡದಿಂದ ನಮಸ್ತೇ ಮಾಸ್ಟ್ರೆ ತುಳು ನಾಟಕ ಪ್ರದರ್ಶನ ನಡೆಯಿತು.