ಕ್ರೀಡಾಕೂಟ ಆಯೋಜನೆ ಮೂಲಕ ಸಂಘಟನೆ ಬಲಯುತ-ಲಾಲಾಜಿ ಮೆಂಡನ್

ಪಡುಬಿದ್ರಿ: ಕ್ರೀಡಾಕೂಟಗಳನು ಸಂಘಟಸಿ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಂಘಟನೆ ಬಲಯುತವಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಹೆಜಮಾಡಿ ಅಮವಾಸ್ಯೆಕರಿಯ ಬೀಚ್‍ನಲ್ಲಿ ಹೆಜಮಾಡಿಯ ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟದ 36 ಸ್ವ-ಸಹಾಯ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡ ಸ್ನೇಹ ಕ್ರೀಡಾಕೂಟದ ಬಹುಮಾನ ವಿತರಣೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮೆಂಡನ್ ಮಾತನಾಡಿದರು.

ಸರ್ವಧರ್ಮ ಸಮನ್ವಯದ ಕೇಂದ್ರವಾಗಿರುವ ನವೋದಯ ಸಂಸ್ಥೆಯು ಅವಿಭಜಿತ ದಕ ಜಿಲ್ಲೆಯ ಮಹಿಳಾ ಸಬಲೀಕರಣಕ್ಕಾಗಿ ಕಟಿಬದ್ಧವಾಗಿದೆ.ನಮ್ಮ ಕಷ್ಟ ಕಾಲದ ಆಪತ್ಭಾಂಧವ ಸಂಸ್ಥೆಯಾಗಿ ಮೂಡಿಬಂದಿದೆ ಎಂದರು.
ಹೆಜಮಾಡಿ ಬಂದರು ಯೋಜನೆಗಾಗಿ ಈಗಾಗಲೇ ಮುಂದಡಿಯಿಟ್ಟದ್ದು,ಶೀಘ್ರ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದವರು ಹೇಳಿದರು.
ಸನ್ಮಾನ: ಶಾಸಕರಾಗಿ ಆಯ್ಕೆಯಾದ ಲಾಲಾಜಿ ಆರ್.ಮೆಂಡನ್ ಮತ್ತು ಹೆಜಮಾಡಿ ಬಿಲ್ಲವ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಅಮೀನ್‍ರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ: ಇದೇ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಬಹುಮಾನ ವಿತರಣೆ: ಒಕ್ಕೂಟದ ಸದಸ್ಯರಿಗಾಗಿ ಕಡಲ ತಡಿಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು,ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಗೋವರ್ಧನ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಎಸ್‍ಸಿಡಿಸಿಸಿ ಪಡುಬಿದ್ರಿ ಶಾಖೆಯ ಪ್ರಬಂಧಕ ಸುಧಾಕರ್,ನವೋದಯ ಸ್ವ-ಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕ ಹರಿನಾಥ್,ತಾಲೂಕು ಮೇಲ್ವಿಚಾರಕ ಚಂದ್ರಶೇಖರ್,ಒಕ್ಕೂಟದ ಪ್ರೇರಕಿ ಶಶಿಕಲಾ ಮುಖ್ಯ ಅತಿಥಿಗಳಾಗಿದ್ದರು.
ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಮತ್ತು ಸ್ನೇಹಕೂಟದ ಅಧ್ಯಕ್ಷ ಸದಾಶಿವ ಕೋಟ್ಯಾನ್ ಪ್ರಸ್ತಾವಿಸಿದರು.ಪ್ರಾಪ್ತಿ ಮತ್ತು ರಿತಿ ಪ್ರಾರ್ಥಿಸಿದರು.ಏಕನಾಥ ಕರ್ಕೇರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.