ಕ್ರಿಕೆಟ್‍ನೊಂದಿಗೆ ಸಾಮಾಜಿಕ ಸೇವೆ ಮಾದರಿ-ಜಯ ಸಿ.ಕೋಟ್ಯಾನ್

ಪಡುಬಿದ್ರಿ: ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್‍ನೊಂದಿಗೆ ಗ್ರಾಮಾಭಿವೃದ್ಧಿಗೆ ಪೂರಕವಾಗಿ ನೂರಾರು ಸಾಮಾಜಿಕ ಸೇವೆ ನಡೆಸುತ್ತಿರುವ ಕೋಡಿ ಕ್ರಿಕೆಟರ್ಸ್ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ಜಾತಿ ಮತ ಬೇಧ ಮರೆತು ಸಮಾಜ ಸೇವೆ ಮಾಡುವ ತಂಡಕ್ಕೆ ಮೊಗವೀರ ಮಹಾಜನ ಸಂಘ ಸದಾ ಬೆಂಬಲ ನೀಡಲಿದೆ ಎಂದು ಅವಿಭಜಿತ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಹೇಳಿದರು.

ಹೆಜಮಾಡಿ ಕೋಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಕೋಡಿ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಂಡ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಮತ್ತು ರಕ್ತದಾನಿ ಕಾರ್ಡ್ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಂದರ್ಭ ಇತ್ತೀಚೆಗೆ ಕೋಡಿ ಕ್ರಿಕೆಟರ್ಸ್‍ನ ಹತ್ತನೇ ವರ್ಷದ ರಕ್ತದಾನ ಶಿಬಿರದಲ್ಲಿ ರಕ್ತದಾನಗೈದ 126 ಮಂದಿಗೆ ರಕ್ತದಾನಿ ಕಾರ್ಡ್‍ಗಳನ್ನು ಹಾಗೂ 397 ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಈ ಸಂದರ್ಭ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‍ಗಳ ಬಗ್ಗೆ ಮಾಹಿತಿ ನೀಡಿದ ದಕ ಜಿಲ್ಲಾ ಆರೋಗ್ಯ ಇಲಾಖೆಯ ಎಸ್‍ಎಎಸ್‍ಟಿ ವಿಂಗ್‍ನ ಸಂಯೋಜಕ ಸಚ್ಚಿದಾನಂದ ಈ ಕಾರ್ಡ್‍ಗಳ ಮೂಲಕ 1650 ಕಾಯಿಲೆಗಳಿಗೆ ಪ್ರಯೋಜನ ಪಡೆಯಬಹುದಾಗಿದೆ ಎಂದರು.

ಪ್ರಯೋಜನಗಳನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 36 ಕಾಯಿಲೆಗಳು, ಸಾಮಾನ್ಯ ಹಂತದಲ್ಲಿ 291 ಕಾಯಿಲೆಗಳು, ಸಂಕೀರ್ಣ ದ್ವಿತೀಯ ಹಂತದಲ್ಲಿ 251 ಕಾಯಿಲೆಗಳು, ತೃತೀಯ ಹಂತದ 900 ಕಾಯಿಲೆಗಳು, ತುರ್ತು ಚಿಕಿತ್ಸೆ ಹಂತದ 169 ಕಾಯಿಲೆಗಳನ್ನು ವಿಂಗಡಿಸಲಾಗಿದ್ದು, ಎಲ್ಲಾ ಹಂತಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಥವಾ ಸರಕಾರಿ ಆಸ್ಪತ್ರೆಗಳ ಶಿಫಾರಸ್ಸು ಮುಖ್ಯವಾಗಿದೆ. ಕಾರ್ಡ್ ಇಲ್ಲದಿದ್ದರೂ ರೇಷನ್ ಮತ್ತು ಆಧಾರ್ ಕಾಡ್ ಮೂಲಕವೂ ಪ್ರಯೋಜನ ಪಡೆಯಬಹುದಾಗಿದೆ. ಬಿಪಿಎಲ್ ಕಾರ್ಡ್‍ದಾರರಿಗೆ ಶೇ.100ರಷ್ಟು(ಗರಿಷ್ಟ ವಾರ್ಷಿಕ ರೂ. 5 ಲಕ್ಷ) ಮತ್ತು ಎಪಿಎಲ್ ಕಾರ್ಡ್‍ದಾರರಿಗೆ ಶೇ.30(ಗರಿಷ್ಟ ರೂ.1.50ಲಕ್ಷ) ರಿಯಾಯಿತಿ ದೊರಕಲಿದೆ ಎಂದವರು ಮಾಹಿತಿ ನೀಡಿದರು.

ಕೋಡಿ ಕ್ರಿಕೆಟರ್ಸ್ ವತಿಯಿಂದ ಈ ಹಿಂದೆ 3 ಬಾರಿ ಹಿರಿಯ ನಾಗರಿಕರಿಗೆ ಪಂಡರಾಪುರ ಉಚಿತ ಪ್ರವಾಸ ಸೌಲಭ್ಯ ನಡೆಸಲಾಗಿದ್ದು, ಈ ಬಾರಿ ಹಿರಿಯ ನಾಗರಿಕರಿಗೆ ಉಚಿತ ತಿರುಪತಿ ಪ್ರವಾಸ ನಡೆಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್ ಪ್ರಕಟಿಸಿದರು. ಅದೇ ರೀತಿ ಸ್ತ್ರೀಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನೂ ಮುಂದಿನ ಬಾರಿ ಕೈಗೊಳ್ಳಲಾಗುವುದು ಎಂದರು.

ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಪಾಲ್ ಸುವರ್ಣ, ಜೇಸಿಐ ಪಡುಬಿದ್ರಿ ಪೂರ್ವಾಧ್ಯಕ್ಷ ಹರೀಶ್ ಕುಮಾರ್, ಸಣ್ಣಗುಂಡಿ ಮೊಗವೀರ ಮಹಾಸಭಾ ಅಧ್ಯಕ್ಷ ಹೇಮಾನಂದ ಪುತ್ರನ್, ಅನಿಲ್ ಸಾಲ್ಯಾನ್ ಬಪ್ಪನಾಡು, ಕೋಡಿ ಕ್ರಿಕೆಟರ್ಸ್ ಅಧ್ಯಕ್ಷ ಸೀತಾರಾಮ ಬಂಗೇರ ಮುಖ್ಯ ಅತಿಥಿಗಳಾಗಿದ್ದರು.
ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.