ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆ ಕಾಂಗ್ರೆಸ್ ಸಾಧನೆ-ಸೊರಕೆ

ಪಡುಬಿದ್ರಿ: ಸುದೀರ್ಘ ಅವಧಿಯಲ್ಲಿ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಕ್ರಾಂತಿಕಾರಿ ಸಾಮಾಜಿಕ ಬದಲಾವಣೆ ಮಾಡಿದ ಕಾರಣ ಇಂದು ದೇಶವು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಪಡುಬಿದ್ರಿಯ ಸಾಯಿ ಆರ್ಕೇಡ್ ಸಭಾಂಗಣದಲ್ಲಿ ಪಡುಬಿದ್ರಿಯ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಆಟಿದ ತಮ್ಮನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೊರಕೆ ಮಾತನಾಡಿದರು.

ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ಸು ಕೆಡಿಸಬೇಡಿ. ಪಕ್ಷದ ಪ್ರಗತಿಗೆ ಸೌಹಾರ್ಧಯುತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ದುಡಿಯಬೇಕು ಎಂದವರು ಹೇಳಿ, ಭಾಷೆ, ಧರ್ಮ, ಜಾತಿ ಬೇಧ ಮರೆತು ಒಂದಾಗಿ ನಡೆಸುವ ಕಾರ್ಯಕ್ರಮಗಳಿಂದ ಸೌಹಾರ್ದತೆ ಬೆಳೆಯುತ್ತದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ತುಳು ಜಾನಪದ ಚಿಂತಕ ಪಿ.ಕೆ.ಸದಾನಂದ ಮಾತನಾಡಿ, ಯುವ ಜನತೆ ಅಡ್ಡದಾರಿ ಹಿಡಿಯಲು ಪ್ರೇರೇಪಿಪಿಸುವ ಮದರಂಗಿ ಸಂಭ್ರಮಕ್ಕೆ ತಿಲಾಂಜಲಿ ನೀಡಬೇಕು. ನಮ್ಮ ಸಂಸ್ಕøತಿಯ ಬಗ್ಗೆ ಎಳೆಯರಿಗೆ ತಿಳಿ ಹೇಳುವ ಮೂಲಕ ಅದನ್ನು ಪರಿಪಾಲಿಸುವಂತೆ ಪ್ರೇರೇಪಿಸಬೇಕು ಎಂದವರು ಹೇಳಿದರು.
ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಇಸ್ರೇಲ್ ಮಾದರಿ ಕೃಷಿ ಚಟುವಟಿಕೆ ಇಂದು ನಮಗೆ ಬೇಕಾಗಿದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನವೀನ್‍ಚಂದ್ರ ಜೆ.ಶೆಟ್ಟಿ ಮಾತನಾಡಿ, ಕಾಂಗ್ರೆಸ್ ತನ್ನ ಸಾಧನೆಗಳನ್ನು ಸೂಕ್ತವಾಗಿ ಜನರಿಗೆ ಮುಟ್ಟಿಸದ ಕಾರಣ ವಿರೋಧ ಪಕ್ಷಗಳು ಅದನ್ನು ತಮ್ಮದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿ ಹೇಳಬೇಕು ಎಂದರು.

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ತಾಪಂ ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು, ಸಮಾಜ ಸೇವಕ ಶಬ್ಬೀರ್ ಹುಸೈನ್, ರಾಜ್ಯ ದಸಂಸ ಪಡುಬಿದ್ರಿ ಘಟಕದ ಪ್ರಧಾನ ಸಂಚಾಲಕ ಲೋಕೇಶ್ ಅಂಚನ್, ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ಪಡುಬಿದ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತಾ ಲಕ್ಷ್ಮಣ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ರಾಜೇಶ್ ಶೇರಿಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಧಾಕರ್ ಕೆ. ವಂದಿಸಿದರು.