ಕೌಶಲಭರಿತ ಶಿಕ್ಷಕರಿಂದ ಸರಕಾರಿ ಶಾಲೆಯಲ್ಲೂ ಉನ್ನತ ಮಟ್ಟದ ಶಿಕ್ಷಣ ನೀಡಲು ಸಾಧ್ಯ -ಅದಮಾರು ಶಿಕ್ಷಣ ಸಂಸ್ಥೆಯ ನೂತನ ಕೊಠಡಿ ಉದ್ಘಾಟಿಸಿ ಅದಮಾರು ಶ್ರೀ

ಪಡುಬಿದ್ರಿ: ಕೌಶಲಭರಿತ ಶಿಕ್ಷಕರಿಂದ ಸರಕಾರಿ ಶಾಲೆಯಲ್ಲೂ ಉನ್ನತ ಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ. ಪಠ್ಯ ರಚನೆ ಸಮಿತಿಯಲ್ಲೂ ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳ ತಜ್ಞರನ್ನು ನೇಮಿಸಿ ಪಠ್ಯ ರಚಿಸಿ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಲು ಸರಕಾರ ಮುಂದಾಗಬೇಕು. ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರಿ ನಿಯಮಾವಳಿಗಳಲ್ಲಿ ಸ್ವಲ್ಪ ಸಡಿಲಿಕೆ ನೀಡಬೇಕು ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಶುಕ್ರವಾರ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಕಿಶೋರಪ್ರಿಯಃ ಕಟ್ಟಡದ ಪೂರ್ವ ಪ್ರಾಥಮಿಕದ ಚಿತ್ರ ವಿನ್ಯಾಸ ಕೊಠಡಿಗಳನ್ನು, ಪ್ರಿನ್ಸಿಪಾಲ್ ಕೊಠಡಿ ಮತ್ತು ಸಿಬ್ಬಂದಿ ಕಛೇರಿಗಳನ್ನು ಮುಜರಾಯಿ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಜತೆಗೂಡಿ ಉದ್ಘಾಟಿಸಿ ಶ್ರೀಪಾದರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಪರಿಣಿತ ಶಿಕ್ಷಕರನ್ನು ನೇಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಖಾಸಗಿ ಶಾಲೆಗಳನ್ನು ಮೀರಿ ಮಕ್ಕಳು ಸರಕಾರಿ ಶಾಲೆಗಳಲ್ಲಿ ದಾಖಲಾಗಲಿದ್ದಾರೆ ಎಂದು ಶ್ರೀಗಳು ಭವಿಷ್ಯ ನುಡಿದರು.

ಶಿಸ್ತು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪರ್ಯಾಯ ಅದಮಾರು ಶಿಕ್ಷಣ ಸಂಸ್ಥೆ. ಹಾಗಾಗಿ ಇದು ಸಮಾಜಕ್ಕೆ ದಾರಿದೀಪ ಎಂದು ಹೇಳಿದ ಕೋಟ ಶ್ರೀನಿವಾಸ ಪೂಜಾರಿ, ಕೊರೊನಾ ನಿಯಂತ್ರಣದೊಂದಿಗೆ ಬದುಕು ಕಟ್ಟಿಕೊಳ್ಳಬೇಕಾದ ಸಂದಿಗ್ದತೆ ಬಂದಿದೆ. ಆರೋಗ್ಯ ಮತ್ತು ಸಮತೋಲನ ಮಾಡಬೇಕದ ಅನಿವಾರ್ಯತೆ ಸರಕಾರದ ಮೇಲಿದೆ. ಲಾಕ್‍ಡೌನ್ ಒಂದೆ ಪರ್ಯಾಯವಲ್ಲ ಎಂದವರು ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಸಾಧ್ಯತೆ ಕಡಿಮೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಸನ್ಮಾನ: ಇದೇ ಸಂದರ್ಭ ಶಿಕ್ಷಕ ವೃಂದದ ವತಿಯಿಂದ ಶ್ರೀಪಾದರನ್ನು, ಶಿಕ್ಷಣ ಸಂಸ್ಥೆಯ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಉಪನ್ಯಾಸಕ ಡಾ. ಜಯಶೇಖರ ಕಂಗಣ್ಣಾರು ನಿರ್ವಹಿಸಿದರು. ಪ್ರಿನ್ಸಿಪಾಲ್ ಎಮ್.ರಾಮಕೃಷ್ಣ ಪೈ ವಂದಿಸಿದರು.

ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯಸ್ಥೆ ಲಕ್ಷ್ಮೀ ಉಡುಪ, ಕನ್ನಡ ವಿಭಾಗದ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್, ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರವೀಣ್ ಕುಮಾರ್, ಉಪ ಪ್ರಿನ್ಸಿಪಾಲ್ ಒಲಿವಿಯಾ ಡಿಸೋಜಾ ಉಪಸ್ಥಿತರಿದ್ದರು.
ಬಾಕ್ಸ್; ಆಡಳಿತ ಮಂಡಳಿಯ ಕೋರಿಕೆಯಂತೆ ಅದಮಾರು ಶಿಕ್ಷಣ ಸಂಸ್ಥೆಯನ್ನು ಸಾರ್ವಜನಿಕರ ಸಂದರ್ಶನಕ್ಕೆ ಅನುವು ಮಾಡಿಕೊಡಲು ಶ್ರೀಪಾದರು ಒಪ್ಪಿಗೆ ನೀಡಿದ್ದಾರೆ. ರಾಜ್ಯಕ್ಕೇ ಮಾದರಿ ಶಿಕ್ಷಣ ಸಂಸ್ಥೆಯಾಗಿರುವ ವಿಶಾಲ ಅದಮಾರು ಶಿಕ್ಷಣ ಸಂಸ್ಥೆಗೆ ಪೋಷಕರು ಹಾಗೂ ಸಾರ್ವಜನಿಕರು ಶಾಲಾ ವಾತಾವರಣಕ್ಕೆ ಧಕ್ಕೆಯಗದಂತೆ ಸಾರ್ವಜನಿಕರು ಭೇಟಿ ನೀಡಬಹುದು ಎಂದವರು ಹೆಳಿದರು. ಇದೇ ಸಂದರ್ಭ ಅದಮಾರು ಶಿಕ್ಷಣ ಸಂಸ್ಥೆಯಲ್ಲಿ ನರೇಂದ್ರ ಮೋದಿಯಂತಹ ನಾಯಕ ಮೂಡಿಬರಬೇಕೆಂಬ ಮಹದಾಸೆ ತಮಗಿದೆ ಎಂದರು.