ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಸಂಘಟನೆಗಳಿಂದ ಆಗಬೇಕು: ಉಮಾನಾಥ ಕೋಟ್ಯಾನ್

ಮೂಲ್ಕಿ: ಕೊರೋನಾ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಲ್ಕಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕೋವಿಡ್-19 ನಿಯಂತ್ರಣದ ಬಗ್ಗೆ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು.

ಮೂಲ್ಕಿ ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮಾತನಾಡಿ ಮೂಲ್ಕಿ ಹೋಬಳಿಯಲ್ಲಿ ಶಾಸಕರ ನೇತೃತ್ವದಲ್ಲಿ ಸಾಕಷ್ಟು ಮುಂಜಾಗರೂಕತೆ ವಹಿಸಿದ್ದರಿಂದ ಕೊರೊನಾ ಮಹಾಮಾರಿಯ ನಿಯಂತ್ರಣ ಬಹಳಷ್ಟು ಸಾಧ್ಯವಾಗಿದೆ ಎಂದು ಹೇಳಿದರು.
ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸಲು ಸಂಘಟನೆಗಳು ಸಹಕಾರ ನೀಡಬೇಕು. ಕೊರೋನಾ ಸೋಂಕಿತರನ್ನು ಯಾವುದೇ ಭಾವನೆಯಲ್ಲಿ ನೋಡದೆ ಪ್ರೀತಿಸಿ ಗುಣಪಡಿಸಬೇಕು. ಮುಂದಿನ ಲಾಕ್‍ಡೌನ್‍ಗೆ ಎಲ್ಲ ಸಂಘಟನೆಗಳ ನಾಗರಿಕರ ಬೆಂಬಲ ಅಗತ್ಯ ಎಂದು ಅವರು ಮನವಿ ಮಾಡಿದರು.

ಮೂಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ ಎನ್. ಮಾತನಾಡಿ ಮೂಲ್ಕಿ ಹೋಬಳಿಯಲ್ಲಿ ಈಗಾಗಲೇ 39 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು ಕೆಲವರು ಗುಣಮುಖರಾಗಿದ್ದಾರೆ. ಪಾಸಿಟಿವ್ ಬಂದಕೂಡಲೇ ಯಾರು ಹೆದರುವ ಅಗತ್ಯವಿಲ್ಲ. ಮುಂಬೈ ಅಥವಾ ಅನ್ಯ ರಾಜ್ಯದಿಂದ ಬಂದವರ ಬಗ್ಗೆ ಮಾಹಿತಿ ನೀಡಲು ಜನರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಮೂಲ್ಕಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ಮಾತನಾಡಿ ಹೋಂ ಕ್ವಾರಂಟೈನ್ ಬಗೆಗಿನ ಗೊಂದಲಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು. ನಪಂ ಸದಸ್ಯೆ ವಿಮಲಾ ಪೂಜಾರಿ ಮಾತನಾಡಿ ತೆಂಗಿನಕಾಯಿ ಬಿದ್ದು ಆಸ್ಪತ್ರೆಗೆ ದಾಖಲಾದರೂ ಕೋವಿಡ್ ಟೆಸ್ಟ್ ನಡೆಸುತ್ತಾರೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಕಾಯುವ ಪ್ರಮೇಯವೂ ಉಂಟಾಗಿದೆ ಎಂದರು. ಗುರುವಾರದಿಂದ ನಡೆಯುವ ಜಿಲ್ಲಾ ಲಾಕ್‍ಡೌನ್‍ನಲ್ಲಿ ತುರ್ತು ಹೋಗಬೇಕಾದರೆ ಈ ಪಾಸ್ ವ್ಯವಸ್ಥೆ ಇದೆಯೇ ಎಂದು ನಪಂ ಮಾಜಿ ಅಧ್ಯಕ್ಷ ಸುನಿಲ್ ಆಳ್ವ ಪ್ರಶ್ನಿಸಿದರು. ಮುಂದಿನ ಲಾಕ್‍ಡೌನ್ ಸಮಯದಲ್ಲಿ ದುಬೈನಿಂದ ಬೆಂಗಳೂರು ಮೂಲಕ ಮೂಲ್ಕಿಗೆ ಬರುವ ಪ್ರಯಾಣಿಕರನ್ನು ಕರೆದುಕೊಂಡು ಬರಲು ವ್ಯವಸ್ಥೆ ಹೇಗೆ? ಇನ್ನು ಮೂಲ್ಕಿ ಟೂರಿಸ್ಟ್ ಕಾರು ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಮಧು ಆಚಾರ್ಯ ಪ್ರಶ್ನಿಸಿದರು. ತಹಶಿಲ್ದಾರ್ ಮಾಣಿಕ್ಯ ಎನ್ ಉತ್ತರಿಸಿ ಕಾರು ಚಾಲಕರು ದುಬೈನಿಂದ ಬರುವ ಪ್ರಯಾಣಿಕರ ಟಿಕೆಟಿನ ನಕಲು ಪ್ರತಿಯನ್ನು ಪಡೆದುಕೊಂಡು ಪ್ರಯಾಣಿಸಬಹುದು ಎಂದು ಹೇಳಿದರು. ಗುರುವಾರದಿಂದ ತುರ್ತು ಹೋಗಬೇಕಾದರೆ ಯಾವುದೇ ಈ ಪಾಸ್ ವ್ಯವಸ್ಥೆ ಇರುವುದಿಲ್ಲ. ಅಗತ್ಯವಿದ್ದರೆ ಶಾಸಕರಿಗೆ ತುರ್ತು ಕರೆ ಮಾಡಿದರೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದರು.

ಮೂಲ್ಕಿಯ ಠಾಣಾಧಿಕಾರಿ ಶೀತಲ್ ಅಲಗೂರು ಮಾತನಾಡಿ ಮುಂದಿನ ಲಾಕ್ ಡೌನ್ ದಿನಗಳಲ್ಲಿ ರಸ್ತೆಯಲ್ಲಿ ಅನಗತ್ಯ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಯಾವುದೇ ಅಕ್ರಮ ದಂಧೆಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಕೆಮ್ರಾಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೈತ್ರಾ, ಕಟೀಲು ಆರೋಗ್ಯ ಕೇಂದ್ರದ ಡಾ.ಭಾಸ್ಕರ ಕೋಟ್ಯಾನ್, ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ಸತೀಶ್ ಅಂಚನ್, ಮಂಜುನಾಥ ಕಂಬಾರ, ರಾಧಿಕಾ ಕೋಟ್ಯಾನ್, ವಂದನಾ ಕಾಮತ್, ವಿವಿಧ ಇಲಾಖೆಯ ಅಧಿಕಾರಿಗಳು, ಮೂಲ್ಕಿ ಹೋಬಳಿಯ ವಿವಿಧ ಪಂಚಾಯತಿಯ ಪಿಡಿಒ ಮತ್ತಿತರರು ಉಪಸ್ಥಿತರಿದ್ದರು.