ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರಕಾರ ಪರಿಣಾಮಕಾರಿ ಕಾರ್ಯಕ್ರಮ-ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ಕಳೆದ ಒಂದೂವರೆ ದಶಕಗಳಿಂದ ಸರಕಾರವು ಕೊರಗ ಸಮುದಾಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪರಿಣಾಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ.ಇದೇ ಹಿನ್ನೆಲೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಜಾಗೃತಿ ಶಿಬಿರಗಳನ್ನು ನಡೆಸುವ ಮೂಲಕ ಅವರಿಗೆ ಪ್ರೇರಣೆ ನೀಡುತ್ತಿದ್ದು ಯಶಸ್ವೀ ಕಾರ್ಯಕ್ರಮ ಎನಿಸಿದೆ ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಪಡುಬಿದ್ರಿಯ ನಾರಾಯಣ ಗುರು ಬಿಲ್ಲವ ಸಭಾಗೃಹದಲ್ಲಿ ಶನಿವಾರ 2018-19ನೇ ಸಾಲಿನಲ್ಲಿ 8,9,10ನೇ ತರಗತಿಗಳಲ್ಲಿ ಕಲಿಯುತ್ತಿರುವ ಕೊರಗ ಸಮುದಾಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ,ಪೋಷಕರಿಗೆ ಹಮ್ಮಿಕೊಳ್ಳಲಾದ ಒಂದು ದಿನದ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರ,ಜಿಲ್ಲಾಡಳಿತ,ಜಿಪಂ,ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ,ಉಡುಪಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ,ಜಿಲ್ಲಾ ಕೊರಗ ಸಂಘಟನೆ,ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ,ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವತಿಯಿಂದ ನಡೆದ ಜಾಗೃತಿ ಶಿಬಿರದಲ್ಲಿ ಜಿಲ್ಲಾ ವ್ಯಾಪ್ತಿಯ 45 ಕೊರಗ ಸಮುದಾಯದ ವಿದ್ಯಾರ್ಥಿಗಳು,45 ಪೋಷಕರು,14 ಶಿಕ್ಷಕರು ಭಾಗವಹಿಸಿದ್ದರು.

ಜೇಸಿಐ ವಲಯ ತರಬೇತುದಾರ ಕೋಟ ಕೆ.ಶಿವರಾಮ್ ಮಾತನಾಡಿ,ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವವನೇ ಜಾಣ.ಮನೋಬಲ ವೃದ್ಧಿಯಿಂದ ಪ್ರಬಲರಾಗಲು ಸಾಧ್ಯವಿದೆ ಎಂದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ,ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಕೋಟ್ಯಾನ್,ಡಿಡಿಪಿಐ ಕಛೇರಿಯ ವಿಷಯ ಪರಿವೀಕ್ಷಕ ನಾಗರಾಜ್,ಕೊರಗ ಸಂಘಟನೆಯ ಅಧ್ಯಕ್ಷ ರಮೇಶ್,ಸರ್ವ ಶಿಕ್ಷಾ ಅಭಿಯಾನದ ಸುಬ್ರಹ್ಮಣ್ಯ ಭಟ್,ಪವನ್ ಮುಖ್ಯ ಅತಿಥಿಗಳಾಗಿದ್ದರು.

ಜೇಸಿಐ ವಲಯ ತರಬೇತಿದಾರರಾದ ಕೆ.ಕೆ.ಶಿವರಾಮ್ ಮತ್ತು ಸರ್ವಜ್ಞ ತಂತ್ರಿ ತರಬೇತುದಾರರಾಗಿದ್ದರು. ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.