ಕೆಲಸವಿದ್ದವನಿಗೆ ಉದ್ಯೋಗ ನೀಡುವ ಬದಲು ಕೆಲಸವಿಲ್ಲದವರಿಗೆ ನೀಡಿ-ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್

ಪಡುಬಿದ್ರಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸವಿಲ್ಲದ ನಿರುದ್ಯೋಗಿಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ಹಾಗೂ ಹೆಜಮಾಡಿ ವಿಶೇಷ ಗ್ರಾಮ ಸಭೆಯ ನೋಡಲ್ ಅಧಿಕಾರಿ ಜೀವನ್ ಕುಮಾರ್ ಹೇಳಿದರು.

ಅವರು ಹೆಜಮಾಡಿ ಗ್ರಾಪಂ ಸಭಾಂಗಣದಲ್ಲಿ ಗುರುವಾರ ನಡೆದ 2019-20ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಜಮಾಡಿಯಲ್ಲಿ ಲೆಕ್ಕ ಪರಿಶೋಧನೆ ಸಂದರ್ಭ ಓರ್ವರು ಖಾಸಗಿಯಾಗಿ ರಾತ್ರಿ ವೇಳೆ ಉದ್ಯೋಗ ಮಾಡಿಕೊಂಡಿದ್ದು, ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಯೂ ಆಗಿದ್ದಾರೆ. ಇದು ಸರಿಯಲ್ಲ. ಈ ಬಗ್ಗೆ ಸ್ಥಳೀಯಾಡಳಿತವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಯಾವುದೇ ವ್ಯಕ್ತಿ ದಿನದ 24 ಗಂಟೆಗಳಲ್ಲಿ 16 ಗಂಟೆ ದುಡಿಯುವುದು ಸಮಂಜಸವಾಗದು ಎಂದವರು ಹೇಳಿದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಸಂದರ್ಭ ಸಣ್ಣಪುಟ್ಟ ಕ್ಲರಿಕಲ್ ತಪ್ಪುಗಳು ಕಂಡುಬಂದಿದೆ. ಅವೆಲ್ಲವನ್ನೂ ಸರಿಪಡಿಸಲು ಸಾಧ್ಯವಿದೆ ಎಂದ ಅವರು, ಸ್ಥಳೀಯಾಡಳಿತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಈ ಮೂಲಕ ಯೋಜನೆಯ ಸೂಕ್ತ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ ಎಂದರು.
ಲೆಕ್ಕ ಪರಿಶೋಧನಾ ತಾಲೂಕು ಸಂಯೋಜಕ ರಾಜು ಮೂಲ್ಯ ಸ್ಥಳ ಪರಿಶೀಲನೆ ಸಂದರ್ಭ ಕಂಡು ಬಂದ ಅಂಶಗಳನ್ನು ಸಭೆಯ ಮುಂದಿಟ್ಟರು. 25 ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ. ಪರಿಶೀಲನೆಯಲ್ಲಿ ಕಂಡುಬಂದ ನೂನ್ಯತೆಗಳನ್ನು ಮಂಡಿಸಿ ಸರಿಪಡಿಸುವಂತೆ ಸೂಚಿಸಿದರು. ಈ ಪೈಕಿ 8 ಕಾಮಗಾರಿಗಳ ಆಕ್ಷೇಪಣೆ ಬಗ್ಗೆ ಮಾಹಿತಿ ನೀಡಿದರು. ಫಲಾನುಭವಿಗಳು ಸ್ವಯಂ ಕೆಲಸ ಮಾಡಬೇಕೆಂದು ಅವರು ಮನವಿ ಮಾಡಿದರು.