ಕುಡಿಯುವ ನೀರಿಗಾಗಿ ಹೆಜಮಾಡಿ ಪಂಚಾಯಿತಿ ಬಳಿ ಗ್ರಾಮಸ್ಥರ ಪ್ರತಿಭಟನೆ

ಪಡುಬಿದ್ರಿ: ಉಪ್ಪುನೀರಿನ ಹಾವಳಿಯ ಹೆಜಮಾಡಿ ಗ್ರಾಪಂ ವ್ಯಾಪ್ತಿಯ ಕೊಕ್ರಾಣಿ ಕುದ್ರುವಿನ 3 ಮನೆಗಳಿಗೆ ಗ್ರಾಪಂ ನೀರು ಪೂರೈಸುತ್ತಿಲ್ಲವೆಂದು ಕೊಡ ಹಿಡಿದು ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಹೆಜಮಾಡಿ ಗ್ರಾಮದ ಶಾಂಭವಿ ನಡುಗುಡ್ಡೆ ಕೊಕ್ರಾಣಿ ಕುದ್ರು ಪ್ರದೇಶದ ಮೂರು ಮನೆಗಳು ಕಳೆದ 2018 ಅಕ್ಟೋಬರ್‍ನಿಂದಲೇ ಸಮರ್ಪಕ ನೀರಿನ ಸರಬರಾಜಿಲ್ಲದೇ ತೊಂದರೆಗೊಳಗಾಗಿದ್ದು ಶುಕ್ರವಾರ ಹೆಜಮಾಡಿ ಗ್ರಾಪಂ ಎದುರು ಖಾಲಿ ಕೊಡಪಾನ ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದರು.

ಕೊಕ್ರಾಣಿ ಮಟ್ಟುವಿನ ಸ್ಟ್ಯಾನಿ ಫೆರ್ನಾಂಡಿಸ್, ಜೇಮ್ಸ್ ಫೆರ್ನಾಂಡಿಸ್ ಮತ್ತು ಧನಂಜಯ ಎಂಬವರ ಮನೆಗಳಿಗೆ ಕುಡಿಯುವ ನೀರು ಹರಿದು ಬರುವ ಹೆಜಮಾಡಿ ಪಂಚಾಯಿತಿಯ ಪೈಪ್‍ಲೈನ್‍ನಲ್ಲಿ ತೊಂದರೆಯಿದ್ದು ಅದನ್ನು ನಿರ್ವಹಿಸಿ ಕುಡಿಯುವ ನೀರು ಬರುವಂತೆ ಮಾಡಿ ಎಂದು ಹಲವಾರು ಬಾರಿ ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ,ಸ್ಥಳೀಯ ಸದಸ್ಯ ಹಾಗೂ ಪಿಡಿಒ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂಬುದಾಗಿ ಸಂತ್ರಸ್ತರು ದೂರಿಕೊಂಡರು.

ಗ್ರಾಪಂ ಸದಸ್ಯ ಶಿವರಾಮ ಶೆಟ್ಟಿ ಎಂಬವರು ನೀರಿಗಾಗಿ ದೂರವಾಣಿ ಮೂಲಕ ಮಾತನಾಡಿದರೆ ಉಡಾಫೆಯಾಗಿ ಉತ್ತರಿಸುತ್ತಾರೆ ಅವರು ದೂರಿದರು.

ಈ ಸಂದರ್ಭ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಮಾತನಾಡಿ ಪೈಪ್ ಲೈನ್ ಕಾಮಗಾರಿಯನ್ನು ಹೊಸ ಪ್ರಸ್ತಾವನೆಯೊಂದಿಗೆ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಅನುಮೋದನೆಯನ್ನು ಪಡೆದು ಮಾಡಬೇಕಿದೆ.ಆದರೆ ನಾಳೆಯಿಂದಲೇ ಮುಂಗಡವಾಗಿ ಗುತ್ತಿಗೆದಾರರಿಂದ ಈ ಕಾಮಗಾರಿಯನ್ನು ನಡೆಸಿ ಅತೀ ಶೀಘ್ರದಲ್ಲೇ ಆ ಮೂರು ಮನೆಗಳಿಗೆ ನೀರು ಸರಬರಾಜಾಗುವಂತೆ ಕ್ರಮ ಕೈಗೊಳ್ಳಲಾಗುವುದು.ಒಂದು ವೇಳೆ ಅಡಚಣೆಗಳುಂಟಾದರೂ ಕುಡಿಯುವ ನೀರು ಪೂರೈಕೆಗಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಮಾತನಾಡಿ ಕೊಕ್ರಾಣಿ ಪರಿಸರದ 50ಕ್ಕೂ ಹೆಚ್ಚು ಮನೆಗಳಿಗೆ ಪ್ರತಿದಿನ ಬೆಳಿಗ್ಗೆ 2ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜನ್ನು ಮಾಡಲಾಗುತ್ತಿದೆ. ಈ ಮೂರು ಮನೆಗಳಿಗೆ ಪೈಪ್‍ಲೈನ್ ಸಮಸ್ಯೆಯಿದೆ. ಅದನ್ನು ನಾಳೆಯೇ ಸರಿಪಡಿಸಲಾಗುವುದು. ಆದರೆ ಇಲ್ಲೂ ಕೆಲವರು ನೀರು ಸಂಗ್ರಹಿಸಿಕೊಂಡು ಕೈತೋಟ, ತೆಂಗಿನ ತೋಟಗಳಿಗೆ ಇದನ್ನೇ ಮೋಟಾರು ಜೋಡಿಸಿಕೊಂಡು ಬಿಡುವುದಕ್ಕೂ ತೊಡಗಿದ್ದು ಪಂಚಾಯಿತಿ ತನಿಖೆಗೆ ಹೋದಾಗ ಯಾವುದೇ ಪಂಪುಗಳೂ ಇಲ್ಲಿರುವುದಿಲ್ಲ. ತೆಗೆದಿಟ್ಟುಕೊಳ್ಳುತ್ತಾರೆ ಎಂದೂ ಆರೋಪಿಸಿದ್ದಾರೆ. ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳಲಿ.ನಮಗೆ ನೀರು ಬರಲಿ ಎಂದು ಮೂಲ್ಕಿಯ ಕಕ್ವ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಟ್ಟಿರುವ ಉಡುಪಿ, ದ.ಕ., ಗಡಿಭಾಗದ ವಾಸಿಗಳಾದ ಹೆಜಮಾಡಿ ಗ್ರಾಮದ ಈ ಮಂದಿ ಒತ್ತಾಯಿಸಿದ್ದಾರೆ.ಈ ನಡುಗುಡ್ಡೆಯಲ್ಲಿ ಅಗೆದಾಗಲೆಲ್ಲಾ ಉಪ್ಪು ನೀರು ಬರುತ್ತಿದ್ದು ಇವರಿಗೆ ಹೆಜಮಾಡಿ ಗ್ರಾಪಂ ಪೈಪ್‍ಲೈನ್ ಮೂಲಕ ರವಾನಿಸುವ ಸಿಹಿ ನೀರೇ ಕುಡಿಯಲು ಆಧಾರವೆನಿಸಿದೆ.