ಕಾರು-ಗ್ಯಾಸ್ ಸಿಲಿಂಡರ್ ಲಾರಿ ಅಪಘಾತ-ನಾಲ್ವರಿಗೆ ಗಾಯ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದ ಪಣಿಯೂರು ಕ್ರಾಸ್ ಬಳಿ ಗ್ಯಾಸ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಕಾರು ಮಂಗಳವಾರ ಮುಂಜಾನೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳೆಲ್ಲರೂ ಸ್ಥಳೀಯ ಕಟ್ಟಡ ಕಾಮಗಾರಿ ಗುತ್ತಿಗೆ ಸಂಸ್ಥೆಯ ಕಾರ್ಮಿಕರಾಗಿದ್ದು, ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಮೂಲದ ನವೀನ್(26), ಭದ್ರತಾ ಕೆಲಸ ನಿರ್ವಹಿಸುತ್ತಿದ್ದ ಶಿವಮೊಗ್ಗ ನಿವಾಸಿ ಮಂಜು (32) ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ ನಿವಾಸಿ ಮಂಜುನಾಥ್ (23), ಶಿವಮೊಗ್ಗ ಮೂಲದ ಪ್ರವೀಣ್ (25) ಸಣ್ಣಪುಟ್ಟ ಗಾಯಗಳೊಂದಿಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀರ್ಥಹಳ್ಳಿಯಿಂದ ಮಂಗಳೂರಿಗೆ ಅನಿಲ ಸಿಲಿಂಡರ್‍ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಣಿಯೂರು ಹೆದ್ದಾರಿಯತ್ತ ಚಲಿಸಿದ ಕಾರಿಗೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರೆಲ್ಲ ಬೆಳಪುವಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಶ್ವವಿದ್ಯಾನಿಲಯ ಸಂಶೋಧನಾ ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದವರಾಗಿದ್ದಾರೆ.

ಅಪಘಾತದ ರಭಸಕ್ಕೆ ಕಾರು ಹೆದ್ದಾರಿ ಡಿವೈಡರ್ ಮೇಲೇರಿದ್ದು,ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.