ಕಾಪುವಿನಲ್ಲಿ ಪತ್ರಕರ್ತ ಜಯಂತ್ ಪಡುಬಿದ್ರಿ ಸಂಸ್ಮರಣೆ, ಪ್ರತಿಭಾ ಪುರಸ್ಕಾರ ವಿತರಣೆ

ಪಡುಬಿದ್ರಿ: ಕಾರ್ಯನಿರತ ಪತ್ರಕರ್ತರು ತಮ್ಮ ವೃತ್ತಿ ಪರತೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್.ಶೆಟ್ಟಿ ತಿಳಿಸಿದ್ದಾರೆ.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಪು ಪ್ರೆಸ್ ಕ್ಲಬ್‍ನಲ್ಲಿ ಶನಿವಾರ ನಡೆದ ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಗ್ರಾಮೀಣ ಪತ್ರಿಕೋದ್ಯಮ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಪಣಿಯೂರು ಅವರಿಗೆ ಶನಿವಾರ ರೂ.5ಸಾವಿರ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡುವ ಹೊಸಬರನ್ನು ಆಕರ್ಷಿಸಲು ಮುಂದಿನ ದಿನಗಳಲ್ಲಿ ಜಯಂತ್ ಪಡುಬಿದ್ರಿ ಅವರ ಹೆಸರಿನಲ್ಲಿ ಮಾಧ್ಯಮ ಕಾರ್ಯಾಗಾರಗಳನ್ನು ನಡೆಸಲು ಸೂಚಿಸಿದರು.

ಇದೇ ಸಂದರ್ಭ ಜಯಂತ್ ಪಡುಬಿದ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇತ್ತೀಚೆಗೆ ನಿಧನರಾದ ಛಾಯಾಗ್ರಾಹಕ ಕಾಪು ಲಕ್ಷ್ಮಣ್ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಉಡುಪಿಯ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜಪ್ಪ ಡಿ.ಗೋಣಿ , ಜಯಂತ್ ಪಡುಬಿದ್ರಿಯವರ ಆತ್ಮೀಯರಾದ ಕಿಶನ್‍ರಾಜ್ ಪಡುಬಿದ್ರಿ ಮುಖ್ಯಅತಿಥಿಗಳಾಗಿದ್ದರು.  ಕೋಶಾಕಾರಿ ಸಂತೋಷ್ ಕಾಪು, ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು. ಹರೀಶ್ ಕುಮಾರ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕರುಣಾಕರ ನಾಯಕ್ ವಂದಿಸಿದರು.