ಕಳೆದ ವರ್ಷ ನೆರೆಯಲ್ಲಿ ಕೊಚ್ಚಿಹೋದ ಬಾಲಕಿ ಹೆತ್ತವರಿಗೆ ಪರಿಹಾರ ವಿತರಣೆ

ಪಡುಬಿದ್ರಿ: ಕಳೆದ ವರ್ಷ ಸುರಿದ ಭೀಕರ ಮಳೆ ಸಂದರ್ಭ ನೆರೆಗೆ ಕೊಚ್ಚಿಹೋಗಿ ಸಾವನ್ನಪ್ಪಿದ ಪಡುಬಿದ್ರಿ ಪಾದೆಬೆಟ್ಟುವಿನ ನಿಧಿ ಆಚಾರ್ಯ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿ ರೂ.2 ಲಕ್ಷದ ಚೆಕ್‍ನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಂಗಳವಾರ ಮನೆಗೆ ತೆರಳಿ ವಿತರಿಸಿ ಸಾಂತ್ವನ ಹೇಳಿದರು.

ಪ್ರಕೃತಿ ವಿಕೋಪ ನಿಧಿಯಿಂದ ಈಗಾಗಲೇ ರೂ. 5 ಲಕ್ಷ ವಿತರಿಸಲಾಗಿದ್ದು ಬಾಕಿ ಉಳಿದ 2 ಲಕ್ಷ ರೂ. ಚೆಕ್ಕನ್ನು ನಿಧಿ ಆಚಾರ್ಯರ ತಾಯಿ ಆಶಾ ಆಚಾರ್ಯರಿಗೆ ವಿತರಿಸಲಾಯಿತು.

ಕಳೆದ ವರ್ಷ ಮೇ 29 ರಂದು ಒಮ್ಮೆಲೆ ಭೀಕರ ಮಳೆ ಸುರಿದಿತ್ತು. ಶಾಲೆಗೆ ಸೈಕಲ್‍ನಲ್ಲಿ ನಿಧಿ ಆಚಾರ್ಯ ಮತ್ತು ಅಕ್ಕ ನಿಶಾ ಆಚಾರ್ಯ ತೆರಳಿದ್ದು, ಅಕಾಲಿಕ ಮಳೆಯ ಕಾರಣ ಮಧ್ಯಾಹ್ಮ ಶಾಲೆಗೆ ರಜೆ ಘೋಷಿಸಲಾಗಿತ್ತು. ಸೈಕಲ್‍ನಲ್ಲಿ ಮರಳಿ ಮನೆಗೆಂದು ಕಲ್ಸಂಕ ಬಳಿಯಿಂದ ಪಾದೆಬೆಟ್ಟುವಿಗೆ ಸೈಕಲ್‍ನಲ್ಲಿ ಅಕ್ಕ ತಂಗಿ ಬರುತ್ತಿರುವ ಸಂದರ್ಭ ಒಮ್ಮೆಲೆ ನೆರೆ ಉಕ್ಕೇರಿ ಇಬ್ಬರೂ ಸೈಕಲ್ ಸಮೇತ ನೆರೆ ಪಾಲಾಗಿದ್ದರು. ಈ ಸಂದರ್ಭ ಸಾಹಸಿಗರೊಬ್ಬರು ಇಬ್ಬರು ಸಹೋದರಿಯರನ್ನು ರಕ್ಷಿಸಲು ಹರ ಸಾಹಸ ಪಟ್ಟರಾದರೂ ನಿಧಿ ಆಚಾರ್ಯ ನೆರೆ ಪಾಲಾಗಿದ್ದರು. ನಿಧಿ ಆಚಾರ್ಯ ಪಡುಬಿದ್ರಿ ಎಸ್‍ಬಿವಿಪಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದರು.

ಚೆಕ್ ವಿತರಣೆ ಸಂದರ್ಭ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಮುಖಂಡ ರಮಾಕಾಂತ ದೇವಾಡಿಗ, ಗ್ರಾಪಂ ಸದಸ್ಯರಾದ ಜಗದೀಶ ಶೆಟ್ಟಿ ಮತ್ತು ಜಯ ಸಾಲ್ಯಾನ್, ಶರತ್ ಶೆಟ್ಟಿ, ಶರತ್ ಶರ್ಮ, ಅಶೋಕ್ ಪೂಜಾರಿ, ಗ್ರಾಮ ಕರಣಿಕ ಶ್ಯಾಮ್‍ಸುಂದರ್ ಉಪಸ್ಥಿತರಿದ್ದರು.