ಕಟೀಲು ಕ್ಷೇತ್ರಕ್ಕೆ ಮೂಲ್ಕಿ 9 ಮಾಗಣೆಯ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ

ಮೂಲ್ಕಿ:: ಕಟೀಲು ಶ್ರೀ ದುರ್ಗೆಯ ಸಹೋದರಿಯೆಂದೇ ಪ್ರಸಿದ್ಧಿ ಪಡೆದ ಮೂಲ್ಕಿಯ ಬಪ್ಪನಾಡು ದೇವಳದಲ್ಲಿ ಮೂಲ್ಕಿ ಸೀಮೆಯ 9 ಮಾಗಣೆಯ ಭಕ್ತರ ವತಿಯಿಂದ ಕಟೀಲು ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ನಡೆಯಿತು. ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೊರೆ ಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಬಪ್ಪನಾಡು ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಸಂತೋಷ್ ಕುಮಾರ್ ಹೆಗ್ಡೆ, ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಪಾದೆಮನೆ ಜಯಂತ ರೈ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಸುಮಾರು 5 ಟನ್ ಬೆಲ್ಲ, 3 ಟನ್ ಅಕ್ಕಿ, ಸಹಸ್ರಾರು ತೆಂಗಿನಕಾಯಿ, ತುಪ್ಪ, ಎಣ್ಣೆ, ಕುಂಬಳಕಾಯಿ, ತೊಗರಿಬೇಳೆ ಸಹಿತ ವಿವಿಧ ಸಾಮಾಗ್ರಿಗಳನ್ನು 300ಕ್ಕೂ ಅಧಿಕ ವಾಹನಗಳಲ್ಲಿ ತುಂಬಿಸಿ ಮೆರವಣಿಗೆ ಮೂಲಕ ಕಟೀಲು ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆ ಮುಂದುವರಿದಂತೆ ಮೂಲ್ಕಿ ಸೀಮೆಯ 9 ಮಾಗಣೆಯ 32 ಗ್ರಾಮಗಳ ಹೊರೆಕಾಣಿಕೆ ವಾಹನಗಳು ಮೆರವಣಿಗೆಯೊಂದಿಗೆ ಸೇರಿಕೊಂಡವು.

ಚಿನ್ನದ ಮಲ್ಲಿಗೆ ಸರ ಸಮರ್ಪಣೆ: ಬಪ್ಪನಾಡು ದೇವಳದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿಯವರು ಕಟೀಲು ಶ್ರೀ ದುರ್ಗೆಗೆ 210 ಗ್ರಾಂ ತೂಕದ ಚಿನ್ನದ ಮಲ್ಲಿಗೆ ಸರ ನೀಡಿದ್ದು, ಅದನ್ನು ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕೊಂಡೊಯ್ದು ಕಟೀಲು ದುರ್ಗೆಗೆ ಸಮರ್ಪಿಸಲಾಯಿತು.