ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಧಿಸಿ ತೋರಿಸಿ-ಜಯ ಸಿ.ಸುವರ್ಣ

ಪಡುಬಿದ್ರಿ: ಅವಿಭಜಿತ ದಕ ಜಿಲ್ಲೆಯ ಬಿಲ್ಲವ ಸಮಾಜ ಸಂಘಟನೆ ಮೂಲಕ ಬಲಯುತಗೊಂಡು ಸಾಮಾಜಿಕ ಅಭಿವೃದ್ಧಿ ಸಾಧಿಸಿದೆ.ಇತರರರೂ ಇದನ್ನು ಮಾದರಿಯಾಗಿಟ್ಟುಕೊಂಡು ಒಗ್ಗಟ್ಟಿನಲ್ಲಿ ಬಲವಿದೆ ಎಂದುದನ್ನು ಸಾಧಿಸಿ ತೋರಿಸಬೇಕು ಎಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಕಾರ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಹೇಳಿದರು.

ಹೆಜಮಾಡಿ ಬಿಲ್ಲವರ ಸಂಘದ ಸಮುಚ್ಛಯಕ್ಕೆ 30 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ಜೋಡಿಸಿದ ರತ್ನಾ ಶಂಕರ್ ಕೋಟ್ಯಾನ್ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿ,ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಮಾತನಾಡಿ,ಬಿಲ್ಲವ ಸಮಾಜದ ಸಮಗ್ರ ಅಭಿವೃದ್ಧಿಗೆ ಜಯ ಸುವರ್ಣರು ಪ್ರೇರಕ ಶಕ್ತಿ ಎಂದು ಹೇಳಿ ವಿದ್ಯೆ ಹಾಗೂ ಆರೋಗ್ಯಕ್ಕೆ ಸಂಘಟನೆಗಳು ಹೆಚ್ಚು ಮುತುವರ್ಜಿ ವಹಿಸಬೇಕೆಂದರು.

ಸನ್ಮಾನ: ಇದೇ ಸಂದರ್ಭ ಬಿಲ್ಲವ ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾದ ಜಯ ಸಿ.ಸುವರ್ಣರನ್ನು ಹೆಜಮಾಡಿ ಬಿಲ್ಲವ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ವಾಸುದೇವ ಆರ್.ಕೋಟ್ಯಾನ್ ಮತ್ತವರ ಪತ್ನಿ ಮೋಹಿನಿ ವಾಸುದೇವ,ಮುಂಬೈ ಬಿಲ್ಲವರ ಅಸೋಸೊಯೇಶನ್ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್,ಸಂಘದ ಕಾರ್ಯಾಲಯದ ದಾನಿ ಮುಂಬೈ ಉದ್ಯಮಿ ಚಂದ್ರಶೇಖರ ಎಸ್.ಪೂಜಾರಿ ವಡಾಲ,ಸಭಾಂಗಣದ ದಾನಿ ರತ್ನಾ ಶಂಕರ್ ಕೋಟ್ಯಾನ್ ದಾಮಾಸ್‍ಕಟ್ಟೆ,ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್ ಮತ್ತವರ ಪತ್ನಿ ನಿರ್ಮಲಾ ಅಮೀನ್,ಉದ್ಯಮಿ ಅರುಣ್ ಮಹಾಬಲ ಪೂಜಾರಿಯವರನ್ನು ಸನ್ಮಾನಿಸಲಾಯಿತು.

ಸಂಘದ ಕ್ಷೇಮನಿಧಿಗೆ ಒಂದು ಲಕ್ಷಕ್ಕೂ ಅಧಿಕ ದೇಣಿಗೆ ನೀಡಿದ ಹೆಜಮಾಡಿ ದೊಡ್ಡಮನೆ ಹರೀಶ್ ಸುಂದರ ಪೂಜಾರಿಯವರನ್ನು ಗೌರವಿಸಲಾಯಿತು.
ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಆದಾಯ ತೆರಿಗೆ ಇಲಾಖಾಧಿಕಾರಿ ಹರೀಶ್ ಮೂಲ್ಕಿ,ಮುಂಬೈ ಉದ್ಯಮಿ ರಾಮ ಜಿ.ಸುವರ್ಣ,ಪ್ರೇಮಾ ಡಿ.ಕೋಟ್ಯಾನ್,ಸಾತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್.ವಿ.ಅಮೀನ್,ಹೆಜಮಾಡಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಾವತಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಕಾರ್ಯದರ್ಶಿ ಸುನೀತಾ ಎನ್.ಕರ್ಕೇರ ಸ್ವಾಗತಿಸಿದರು.ಕೋಶಾಧಿಕಾರಿ ಪ್ರಬೋದ್‍ಚಂದ್ರ ಹೆಜ್ಮಾಡಿ ಪ್ರಸ್ತಾವಿಸಿದರು.ಶಿವರಾಮ ಜಿ.ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.ಜತೆ ಕಾರ್ಯದರ್ಶಿ ಸುಧೀರ್ ಕರ್ಕೇರ ವಂದಿಸಿದರು.