ಐಷಾರಾಮಿ ಬದುಕಿಗಾಗಿ ಪರಿಸರ ಬಳಕೆ ಸಲ್ಲದು-ಸಿ.ಎಮ್.ಜೋಷಿ

ಪಡುಬಿದಿ:  ನಮ್ಮ ದೇಶದ ಇತಿಹಾಸವನ್ನು ಗಮನಿಸಿದಾಗ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಹಿಂದಿನ ಜೀವನ ಪದ್ಧತಿ ಅತ್ಯುತ್ತಮವಾಗಿತ್ತು. ಇಂದು ಐಷಾರಾಮಿ ಬದುಕಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಅವಶ್ಯಕತೆಗಿಂತ ಅಧಿಕವಾಗಿ ಬಳಸುವುದು ಮಾತ್ರವಲ್ಲದೆ ವ್ಯರ್ಥ ಮಾಡುವುದು ಸರ್ವತಾ ಸಿಂಧುವಲ್ಲ.ಕೊಂಡುಕೊಳ್ಳುತನ ಸಲ್ಲದು.ಈ ಬಗ್ಗೆ ವಿಮರ್ಶೆ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಮ್.ಜೋಷಿ ಹೇಳಿದರು.

ಪಡುಬಿದ್ರಿಯ ಬಂಟರ ಭವನದ ರಮೇಶ್ ಮಹಾಬಲ ಶೆಟ್ಟಿ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರಾವಳಿ ನಿಯಂತ್ರಣ ಪ್ರಾಧಿಕಾರ ಮತ್ತು ಭಾರತ್ ಸ್ಕೌಟ್ಸ್ ಗೌಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ-2019 ರ ಅಂಗವಾಗಿ ನಡೆದ ಪರಿಸರ ಜಾಥಾ ಮತ್ತು ಸಭಾ ಕಾರ್ಯಕ್ರಮವನ್ನು ಹೂ ಕುಂಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರದಿಂದ ಬೇಕಾದಷ್ಟನ್ನು ಪಡೆಯುವ ನಾವು ಪರಿಸರಕ್ಕೆ ಏನನ್ನು ನೀಡಿದ್ದೇವೆ ಎಂದು ಪರಾಮರ್ಶಿಸಬೇಕು. ಪರಿಸರದಿಂದ ಅತ್ಯುತ್ತಮವಾದುದನ್ನು ಪಡೆಯುವ ನಾವು ತ್ಯಾಜ್ಯವನ್ನಷ್ಟೇ ಪರಿಸರಕ್ಕೆ ನೀಡಿ ಹಾನಿ ಮಾಡುತ್ತಿದ್ದೇವೆ. ಈ ಬಗ್ಗೆ ನಮ್ಮ ನಡವಳಿಕೆ ಬದಲಾಗಲೇಬೇಕು.ಮುಂದಿನ ದಿನಗಳಲ್ಲಿ ನಮ್ಮ ನಿತ್ಯ ಜೀವನದಲ್ಲಿ ಯಾವುದೇ ತ್ಯಾಜ್ಯವನ್ನು ಪರಿಸರಕ್ಕೆ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಮತ್ತು ಇತರರನ್ನೂ ಪ್ರೇರೇಪಿಸಬೇಕು ಎಂದವರು ಹೇಳಿದರು.

ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪರಿಸರ ಪಿತ್ರಾರ್ಜಿತ ಆಸ್ತಿಯಲ್ಲ.ಅದನ್ನು ಮುಂದಿನ ಜನಾಂಗಕ್ಕೆ ಕೊಡಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಪರಿಸರ ಹಾಳುಗೆಡದಂತೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.ಇಂದಿನ ಕುಡಿಯುವ ನೀರಿ ಅಭಾವ ನಾವು ನಿರ್ಲಕ್ಷ್ಯ ಮಾಡಿದುದರ ಪರಿಣಾಮ. ನಿರಂತರ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕೆಂದರು.
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಅದಾನಿ-ಯುಪಿಸಿಎಲ್ ಕಂಪನಿಯ ಅಧ್ಯಕ್ಷ ಕಿಶೋರ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಅದಾನಿ-ಯುಪಿಸಿಎಲ್ ಕಂಪನಿಯು ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಹೆಜಮಾಡಿ ಟೋಲ್ ಪ್ಲಾಝಾದಿಂದ ಸಭಾಂಗಣದವರೆಗೆ ನಡೆದ ಪರಿಸರ ಜಾಥಾವನ್ನು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉದ್ಘಾಟಿಸಿದರು. ಇದೇ ಸಂದರ್ಭ ಹೆಜಮಾಡಿ ಕ್ರೀಡಾಂಗಣ ಬಳಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸಿದ ವಾಯು ಮಾಲಿನ್ಯ ಕುರಿತ ಚಿತ್ರ ಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕ ಶೇಷಶಯನ ಕಾರಿಂಜ,ಕರಾವಳಿ ನಿಯಂತ್ರಣ ಪ್ರಾಧಿಕಾರದ ರಮೇಶ್ ಬಾಬು, ಕಾಪು ತಹಶೀಲ್ದಾರ್ ಎಸ್.ಆರ್.ರಶ್ಮಿ, ಬಿಇಒ ಮಂಜುಳಾ ಮುಖ್ಯ ಅತಿಥಿಗಳಾಗಿದ್ದರು.

ಭಾರತೀಯ ವಿಕಾಸ ಟ್ರಸ್ಟ್‍ನ ಹಿರಿಯ ಕೃಷಿ ಸಲಹೆಗಾರ ಎಚ್.ಅನಂತ ಪ್ರಭು ವಿಶೇಷ ಉಪನ್ಯಾಸಗೈದರು.
ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.

ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ಸ್ವಾಗತಿಸಿದರು. ದೀಪಾ ಉಡುಪ ಕಾರ್ಯಕ್ರಮ ನಿರ್ವಹಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖಾ ವಿಷಯ ಪರಿವೀಕ್ಷಕ ನಾಗರಾಜ್ ವಂದಿಸಿದರು.