ಎಸ್‍ಬಿವಿಪಿ ಶತಮಾನೋತ್ಸವ, ಗಣಪತಿ ಪ್ರೌಢಶಾಲೆ ಸುವರ್ಣ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ:: ಯಾವುದೇ ಶಾಲೆಯ ಹಳೆ ವಿದ್ಯಾರ್ಥಿಗಳ ಚಿಂತನೆ ಒಳ್ಳೆಯದಿದ್ದಾಗ ಶಾಲೆಯ ಉತ್ತಮ ಪ್ರಗತಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘವು ಇತರೆಡೆಗಳಿಗೆ ಮಾದರಿಯಾಗಿದೆ. ನಿಮ್ಮೆಲ್ಲರ ಆಶಯದಂತೆ ಜ. 4 ಹಾಗೂ 5ರ ಶಾಲಾ ಶತಮಾನೋತ್ಸವ, ಸುವರ್ಣ ಸಂಭ್ರಮಗಳು ವಿಜ್ರಂಭಣೆಯಿಂದ ನಡೆದು ನಿಮ್ಮ ಆಶಯವು ಪೂರ್ಣಗೊಳ್ಳಲಿ ಎಂದು ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ನಿವೃತ್ತ ಅಧ್ಯಾಪಕ ಅನಂತ ಪಟ್ಟಾಭಿ ರಾವ್ ಹೇಳಿದರು.
ಅವರು ನ. 25ರಂದು ಎಸ್‍ಬಿವಿಪಿ ಶಾಲಾ ಕಿರು ಸಭಾಂಗಣದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಸುವರ್ಣ ಸಂಭ್ರಮ ಹಾಗೂ ಎಸ್‍ಬಿವಿಪಿ ಹಿ. ಪ್ರಾ.ಶಾಲಾ ಶತಮಾನೋತ್ಸವ ಸಂಭ್ರಮಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಮೋಹನ್ ಹೆಗ್ಡೆ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಗಣೇಶ್ ಕೋಟ್ಯಾನ್, ವೆಂಕಟೇಶ್ ಭಟ್, ರಮಾಕಾಂತ ರಾವ್, ಶ್ರೀಧರ ಆಚಾರ್ಯ, ಗಣಪತಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗಣಪತಿ ಭಟ್, ಎಸ್‍ಬಿವಿಪಿ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸುಮತಿ ಹೆಗಡೆ, ಅನಸೂಯ ಶೆಣೈ, ಪೂರ್ಣಿಮಾ ಆಚಾರ್ಯ, ಕಸ್ತೂರಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ರಾಜಮೋಹನ್‍ಹೆಗ್ಡೆ ಸ್ವಾಗತಿಸಿದರು. ಶ್ರೀಧರ ಆಚಾರ್ಯ ಪ್ರಸ್ತಾವಿಸಿದರು. ಗಣಪತಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಣಪತಿ ಭಟ್ ವಂದಿಸಿದರು.