ಎಲ್‍ಐಸಿ ಪಾಲಿಸಿ ಪಡೆಯುವ ಮೂಲಕ ದೇಶದ ಉನ್ನತಿಗೆ ಸಹಕರಿಸಿ-ಗುರುದತ್

ಮೂಲ್ಕಿ: ದೇಶದ ಅಭಿವೃದ್ಧಿಗಾಗಿ ಭಾರತೀಯ ಜೀವ ವಿಮಾ ನಿಗಮವು ಆದಾಯದ ಸಿಂಹಪಾಲನ್ನು ಮೀಸಲಿರಿಸಿದೆ. ಇದನ್ನು ಪರಿಗಣಿಸಿ ದೇಶದ ಅಭಿವೃದ್ಧಿ ಬಯಸುವ ಪ್ರತಿಯೊಂದು ಪ್ರಜೆಯೂ ವಿಮಾ ಪಾಲಿಸಿ ಪಡೆಯುವ ಮೂಲಕ ದೇಶದ ಉನ್ನತಿಗೆ ಸಹಕರಿಸಬಹುದಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ನೌಕರರ ಸಂಘದ ಉಡುಪಿ ವಿಭಾಗೀಯ ಮಾಜಿ ಪ್ರಧಾನ ಕಾರ್ಯದರ್ಶಿ ಗುರುದತ್ ಹೇಳಿದರು.
ಶನಿವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ಮೂಲ್ಕಿ ಘಟಕದ ಹದಿನೈದನೇ ವಾರ್ಷಿಕೋತ್ಸವದ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಸಂಘಟನೆಗಳು ತಮ್ಮ ಸದಸ್ಯರ ಶ್ರೇಯೋಭಿವೃದ್ಧಿ ಬಯಸುವ ಜೊತೆಗೆ ಮೂಲ ಸಂಸ್ಥೆಯ ಅಭಿವೃದ್ಧಿಗೆ ಸಹಾಯ ಕಲ್ಪಿಸಿಕೊಟ್ಟರೆ ಮಾತ್ರ ಅಭಿವೃದ್ಧಿ ಸಾಧ್ಯ. ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿಯಲ್ಲಿ ಪ್ರತಿನಿಧಿ ಸಂಘಟನೆಗಳ ಪಾತ್ರ ಅಭಿನಂದನೀಯ ಎಂದರು.

ಮುಖ್ಯ ಅತಿಥಿಯಾಗಿದ್ದ ನಿಗಮದ ಮೂಲ್ಕಿ ಶಾಖೆಯ ಪ್ರಬಂಧಕರಾದ ದುರ್ಗಾರಾಮ ಶೆಣೈ ಮಾತನಾಡಿ, ಇಂದು ಖಾಸಗೀ ವಿಮಾ ಸಂಸ್ಥೆಗಳು ಪೈಪೋಟಿ ನೀಡಲು ಪ್ರಯತ್ನಿಸುತ್ತಿದ್ದರೂ ಜನತೆ ನಮ್ಮ ಮೇಲಿಟ್ಟಿರುವ ದೃಢ ವಿಶ್ವಾಸ ಹಾಗೂ ಪ್ರತಿನಿಧಿಗಳ ಉತ್ತಮ ಸೇವೆಯ ಕಾರಣ ನಿಗಮವು ಧನಾತ್ಮಕವಾಗಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿನಿಧಿ ಸಂಘಟನೆ ಮೂಲ್ಕಿ ಶಾಖೆಯ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ವಹಿಸಿ ಸಂಸ್ಥೆಯ ಪ್ರಗತಿಗೆ ಕಾರಣಕರ್ತರನ್ನು ಅಭಿನಂದಿಸಿದರು.
ಸನ್ಮಾನ: ಈ ಸಂದರ್ಭ ಸಮಾಜದಿಂದ ಪರಿತ್ಯಕ್ತ ಮಾನಸಿಕ ರೋಗಿಗಳ ಸಾಂತ್ವನ ಕೇಂದ್ರದ ಮೂಲಕ ಸಮಾಜ ಸೇವೆಗೈಯುತ್ತಿರುವ ಕಾರ್ನಾಡು ಮೈಮೂನಾ ಫೌಂಡೇಶನ್ ಅಧ್ಯಕ್ಷ ಆಪದ್ಭಾಂದವ ಮೊಹಮ್ಮದ್ ಆಸೀಪ್‍ರವರನ್ನು ಸನ್ಮಾನಿಸಲಾಯಿತು.

ಪ್ರತಿನಿಧಿ ಸಾಧಕರಾದ ಗಿರೀಶ್ ಕುಮಾರ್, ರಾಮ್‍ಮೋಹನ್, ಇಂದಿರಾ ಮಾಧವ ಭಟ್‍ರವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಬಿ.ಜಗದೀಶ ಪೈ, ನಿಗಮದ ಪ್ರತಿನಿಧಿ ಸಂಘಟನೆ ರಾಜ್ಯಾಧ್ಯಕ್ಷ ರಮೇಶ್ ಕುಮಾರ್, ಉಡುಪಿ ವಿಭಾಗದ ಅಧ್ಯಕ್ಷ ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ಶಕಿಲಾ ಎಂ.ಆಡ್ಯಂತಾಯ, ಕೋಶಾಧಿಕಾರಿ ರಘುನಾಥ ಶೆಟ್ಟಿ, ಮೂಲ್ಕಿ ಘಟಕ ಕಾರ್ಯದರ್ಶಿ ಲ್ಯಾನ್ಸಿ ಅಲ್ಮೇಡಾ, ಕೋಶಾಧಿಕಾರಿ ವಿನಂತಿ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಗುರುಪುರ, ಮಹಿಳಾ ಸಂಘಟನಾ ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ರಾವ್, ಕಾರ್ಯದರ್ಶಿ ಶಾರದಾ ಬಂಗೇರ ಉಪಸ್ಥಿತರಿದ್ದರು.

ಈ ಸಂದರ್ಭ ವಾರ್ಷಿಕೋತ್ಸವ ಪ್ರಯುಕ್ತ ನಡೆಸಲಾದ ಕ್ರೀಡೋತ್ಸವದ ಬಹುಮಾನ ವಿತರಿಸಲಾಯಿತು. ಪ್ರತಿನಿಧಿ ಸಂಘಟನೆಯ ಮೂಲ್ಕಿ ಘಟಕದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ಸ್ವಾಗತಿಸಿದರು. ಲ್ಯಾನ್ಸಿ ಅಲ್ಮೇಡಾ ವರದಿ ಮಂಡಿಸಿದರು. ರಮೇಶ್ ಕುಮಾರ್ ಪ್ರಸ್ತಾವಿಸಿದರು.ಗ್ರೇಸಿ ಸಿಕ್ವೇರಾ ಮತ್ತು ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ವಂದಿಸಿದರು.

ಬಳಿಕ ಪ್ರತಿನಿಧಿ ಬಳಗದಿಂದ ನೃತ್ಯ ರೂಪಕಗಳು ಕಿರು ನಾಟಕಗಳು ಹಾಸ್ಯ ಕಾರ್ಯಕ್ರಮಗಳು, ಮೂಕಾಭಿನಯ ನಡೆಯಿತು.

ಫೋಟೋ: ಮಾನಸಿಕ ರೋಗಿಗಳ ಸಾಂತ್ವನ ಕೇಂದ್ರದ ಮೂಲಕ ಸಮಾಜ ಸೇವೆಗೈಯುತ್ತಿರುವ ಕಾರ್ನಾಡು ಮೈಮೂನಾ ಫೌಂಡೇಶನ್ ಅಧ್ಯಕ್ಷ ಆಪದ್ಭಾಂದವ ಮೊಹಮ್ಮದ್ ಆಸೀಪ್‍ರವರನ್ನು ಸನ್ಮಾನಿಸಲಾಯಿತು.