ಎಟಿಎಂ ವಾಚ್‍ಮೆನ್ ಕಟ್ಟಿಹಾಕಿ ದರೋಡೆ; ಲಕ್ಷಾಂತರ ಮೌಲ್ಯದ ಮೊಬೈಲ್ ಕಳವು

ರಾಹೆ 66ರ ಪಡುಬಿದ್ರಿ ಕೆಳಗಿನಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಮ್ ವಾಚ್‍ಮೆನ್‍ರನ್ನು ಕೈಕಾಲು ಬಾಯಿಯನ್ನು ಕಟ್ಟಿ ಪಕ್ಕದ ಪೊದೆಗೆ ಬಿಸಾಡಿ ಅದೇ ಕಟ್ಟಡದ ಎರಡು ಅಂಗಡಿಗಳನ್ನು ದರೋಡೆಗೈದ ಘಟನೆ ಶನಿವಾರ ರಾತ್ರಿ ನಡೆದಿದೆ.

ಸುಮಾರು ನಾಲ್ಕೈದು ಮಂದಿಯಿದ್ದ ದರೋಡೆಕೋರರ ಗ್ಯಾಂಗ್ ಒಂದು ಮೊಬೈಲ್ ಅಂಗಡಿಯಿಂದ ಸುಮಾರು ರೂ.1 ಲಕ್ಷಕ್ಕೂ ಅಧಿಕ ಮೌಲ್ಯದ 22 ಮೊಬೈಲ್‍ಗಳನ್ನು ಕದ್ದು ಒಯ್ದಿರುವುದಾಗಿ ಪಡುಬಿದ್ರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಸುಮಾರು 25 – 30ರ ವಯಸ್ಸಿನ ತುಳು ಹಾಗೂ ಮರಾಠಿ ಮಿಶ್ರಿತ ಕೊಂಕಣಿ ಭಾಷೆಯನ್ನು ಮಾತನಾಡುತ್ತಿದ್ದ ದರೋಡೆಕೋರರು ಶನಿವಾರ ಮಧ್ಯರಾತ್ರಿ ಬಳಿಕ 1ಗಂಟೆಯ ಸುಮಾರಿಗೆ ಕಟ್ಟಡ ಸಮೀಪ ಆಗಮಿಸಿ ಪ್ರಶ್ನಿಸಿದ ಕರ್ಣಾಟಕ ಬ್ಯಾಂಕ್ ಎಟಿಎಂನ ವಾಚ್‍ಮೆನ್ ಲಕ್ಷ್ಮಣ ಪೂಜಾರಿ(65) ಅವರ ಕೈ,ಕಾಲು ಮತ್ತು ಬಾಯಿಗಳನ್ನು ಬಟ್ಟೆಯಲ್ಲಿ ಕಟ್ಟಿ ಹಾಕಿ ಕಟ್ಟಡದ ಹಿಂದಿನ ಪೆÇದೆಗೆ ಬಿಸಾಡಿ ತಮ್ಮ ಈ ಕೃತ್ಯವೆಸಗಿದ್ದಾರೆ. ಲಕ್ಷ್ಮಣ ಪೂಜಾರಿ ಅವರ ಕಿಸೆಯಲ್ಲಿದ್ದ 600 ರೂ. ಮೌಲ್ಯದ ಸ್ಯಾಮ್ಸ್‍ಂಗ್ ಮೊಬೈಲ್‍ಮತ್ತು ಕಿಸೆಯಲ್ಲಿದ್ದ 400ರೂ. ನಗದನ್ನು ಮೊದಲಿಗೆ ಇವರು ದರೋಡೆಗೈದಿದ್ದಾರೆ.ಟೀ ಶರ್ಟ್ ಹಾಗೂ ಚಡ್ಡಿ ಧರಿಸಿರುವ ಕಳ್ಳರಲ್ಲಿ ಇಬ್ಬರು ನನ್ನನ್ನು ಕೈ, ಮುಖಕ್ಕೆ ಬಟ್ಟೆಯಿಂದ ಕಟ್ಟಿ ಚಾಕು ತೋರಿಸಿ ಬೊಬ್ಬೆ ಹಾಕಿದರೆ ಜಾಗೃತೆ ಎಂದು ಬೆದರಿಸಿ ನನ್ನನ್ನು ಪೊದೆಗೆ ಎಸೆದು ಹೋಗಿದ್ದಾರೆ ಎಂದವರು ತಿಳಿಸಿದ್ದಾರೆ.
ಅಲ್ಲಿಂದ ಎಟಿಎಂ ಪಕ್ಕದ ಧನಲಕ್ಷ್ಮೀ ಜ್ಯುವೆಲ್ಲರ್ಸ್ ಬೀಗ ಮುರಿದು ಒಳ ಪ್ರವೇಶಿಸಿದ್ದು ಅಲ್ಲಿ ಏನೂ ಸಿಗದ ಕಾರಣ ಅಲ್ಲೇ ಸಮೀಪವಿರುವ ಎವರ್‍ಗ್ರೀನ್ ಮೊಬೈಲ್ ಶಾಪ್‍ನ ಬೀಗ ಮುರಿದು ಒಳ ಮೊಬೈಲ್ ಸೆಟ್ಟುಗಳನ್ನು ಕದ್ದೊಯ್ದಿದ್ದಾರೆ.

ದರೋಡೆಕೋರರಿಂದ ಪೆÇದೆಗೆ ಎಸೆಯಲ್ಪಟ್ಟ ಲಕ್ಷ್ಮಣ ಪೂಜಾರಿ ಮಧ್ಯರಾತ್ರಿಯಿಂದ ಬೆಳಿಗ್ಗಿನ ಜಾವದ 5ರ ಸುಮಾರವರೆಗೂ ಪೆÇದೆಯ ನಡುವೆಯೇ ಇದ್ದು ತನ್ನ ಜೀವರಕ್ಷಣೆಗಾಗಿ ಬೊಬ್ಬಿಡುವ ಪ್ರಯತ್ನದಲ್ಲಿ ನರಳಾಡುತ್ತಿದ್ದರು. ಮಂಗಳೂರಿನಂದ ಮಣಿಪಾಲದವರೆಗೆ ಆಂಗ್ಲ ದೈನಿಕವೊಂದನ್ನು ವಿತರಿಸಿ ಪಡುಬಿದ್ರಿಯ ತನ್ನ ಮನೆಗೆ ಬೆಳಿಗ್ಗಿನ ಜಾವ ಮರಳುವ ಸುರೇಶ್ ಆಚಾರ್ಯ ಈ ನರಳಾಟವನ್ನು ದೆವ್ವವಿರಬಹುದೆಂದು ತಿಳಿದು ಅಲ್ಲಿಂದ ಓಡಿ ಎಟಿಎಂ ಗಾರ್ಡ್ ಲಕ್ಷ್ಮಣ ಪೂಜಾರಿ ಅವರನ್ನು ಹುಡುಕಾಡಿದಾಗ ಅವರೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ಬಳಿಕ ತನ್ನ ಮನೆ ಬಳಿಯ ಸುಧಾಕರ ಮೊೈಲಿ ಹಾಗೂ ಇನ್ನೊಬ್ಬ ಯುವಕನ ಸಹಿತವಾಗಿ ಈ ನರಳಾಟ, ಕೂಗಾಟ ಕೇಳಿ ಬರುತ್ತಿದ್ದಲ್ಲಿ ಹೋಗಿ ನೋಡಿದಾಗ ಅದು ಲಕ್ಷ್ಮಣ ಪೂಜಾರಿ ಅವರೆಂದು ಗೊತ್ತಾಗಿದೆ. ಅವರ ಪತ್ತೆ ಬಳಿಕವಷ್ಟೇ ಈ ದರೋಡೆಕೊರರ ಕೃತ್ಯವು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಎಡಿಶನಲ್ ಎಸ್ಪಿ ಕುಮಾರಚಂದ್ರ, ಕಾರ್ಕಳ ವಿಭಾಗ ಡಿವೈಎಸ್ಪಿ ಬೆಳ್ಳಿಯಪ್ಪ, ಕಾಪು ಸಿಪಿಐ ಹಾಲಮೂರ್ತಿ ರಾವ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ಹಾಗೂ ಶ್ವಾನದಳವೂ ಭೇಟಿ ನೀಡಿ ಪರಿಶೀಲಿಸಿದೆ. ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.