ಉಡುಪಿ ಸ್ಟ್ರೈಕರ್ಸ್‍ಗೆ ಪಡುಬಿದ್ರಿ ಜೈ ಭೀಮ್ ಟ್ರೋಫಿ-2018

ಪಡುಬಿದ್ರಿಯಲ್ಲಿ ಎಸ್‍ಸಿ ಎಸ್‍ಟಿಗಳಿಗಾಗಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಪಾರಮ್ಯ

ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಮೈದಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪಡುಬಿದ್ರಿ(ಅಂಬೇಡ್ಕರ್ ವಾದ) ಘಟಕದ ಆಶ್ರಯದಲ್ಲಿ ಶನಿವಾರ ಮತ್ತು ಭಾನುವಾರ ಎಸ್‍ಟಿ ಎಸ್‍ಟಿಗಳಿಗಾಗಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಸ್ಟ್ರೈಕರ್ಸ್ ತಂಡವು ಜೈ ಭೀಮ್ ಟ್ರೋಫಿ-2018ರೊಂದಿಗೆ ನಗದು ರೂ.44,444/ ಪಡೆಯಿತು.
ಭಾನುವಾರ ಸಂಜೆ ನಡೆದ ಫೈನಲ್‍ನಲ್ಲಿ ಪಾಂಗಾಳ ಮಾಣಿಕ್ಯ ಕ್ರಿಕೆಟರ್ಸ್ ತಂಡವನ್ನು 14 ರನ್‍ಗಳಿಂದ ಸೋಲಿಸಿ ಸ್ಟ್ರೈಕರ್ಸ್ ಪ್ರಶಸ್ತಿ ಪಡೆಯಿತು.ಫೈನಲ್‍ನಲ್ಲಿ ಸೋತ ಮಾಣಿಕ್ಯ ಕ್ರಿಕೆಟರ್ಸ್ ತಂಡವು ದ್ವಿತೀಯ ಪ್ರಶಸ್ತಿಯೊಂದಿಗೆ ನಗದು ರೂ.22,222/ ಪಡೆಯಿತು.

ಸ್ಟ್ರೈಕರ್ಸ್ ತಂಡವು ಸೆಮಿಫೈನಲ್‍ನಲ್ಲಿ ಹಾಸನದ ಬಲಿಷ್ಠ ಹಾಸನಾಂಬ ಕ್ರಿಕೆಟರ್ಸ್ ತಂಡವನ್ನು ರೋಮಾಂಚಕಾರಿಯಾಗಿ 4 ರನ್‍ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.ಸ್ಟ್ರೈಕರ್ಸ್ ತಂಡದ ಉಮೇಶ್ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.ಕ್ವಾರ್ಟರ್ ಫೈನಲ್‍ನಲ್ಲಿ ಸ್ಟ್ರೈಕರ್ಸ್ ತಂಡವು ಹೊಳೆನರಸೀಪುರದ ಜೀನಿಯಸ್ ಕ್ರಿಕೆಟರ್ಸ್ ತಂಡವನ್ನು 10 ರನ್‍ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು.ಹಾಸನಾಂಬ ತಂಡವು ಕ್ವಾರ್ಟರ್ ಫೈನಲ್‍ನಲ್ಲಿ ಜೈ ಭೀಮ್ ಬೆಳಗಾವಿ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು.

ಹಾಸನ,ಬೆಳಗಾವಿ,ಹೊಳೆನರಸೀಪುರ,ಚಿಕ್ಕಮಗಳೂರು,ಸಕಲೇಶಪುರ,ಆಲ್ದೂರು,ಬಾಳ್ದೂರು,ಹೊರನಾಡು,ಕಾಸರಗೋಡುಗಳಿಂದ ಹಲವು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.ಹೊರ ಜಿಲ್ಲೆಗಳ ಪ್ರಾಬಲ್ಯವನ್ನು ಉಡುಪಿಯ ತಂಡಗಳು ಮುರಿದು ಫೈನಲ್‍ನಲ್ಲಿ
ಉಡುಪಿಯ ತಂಡಗಳೇ ಆಟವಾಡುವ ಮೂಲಕ ಗಮನ ಸೆಳೆದರು.
ವೈಯಕ್ತಿಕ ಪ್ರಶಸ್ತಿ: ಸ್ಟ್ರೈಕರ್ಸ್ ತಂಡದ ಉಮೇಶ್ ತನ್ನ ಸರ್ವಾಂಗೀಣ ಆಟಕ್ಕಾಗಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.ಅತ್ಯುತ್ತಮ ಬ್ಯಾಟ್ಸ್‍ಮೆನ್ ಮತ್ತು ಅತ್ಯುತ್ತಮ ಬೌಲರ್ ಆಗಿ ಪಾಂಗಾಳ ಮಾಣಿಕ್ಯ ಕ್ರಿಕೆಟರ್ಸ್‍ನ ಸಂದೀಪ್ ಮತ್ತು ಅರುಣ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಬಹುಮಾನ ವಿತರಣೆ: ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ,ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಹೋಟೆಲ್ ಅಮರ್ ಕಂಫಟ್ರ್ಸ್‍ನ ಮಾಲೀಕ ಮಿಥುನ್ ಆರ್.ಹೆಗ್ಡೆ,ಕಾಪು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಗುಜ್ಜರಬೆಟ್ಟು,ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ,ದಸಂಸ ಅಂಬೇಡ್ಕರ್ ವಾದದ ಅಧ್ಯಕ್ಷ ಲೋಕೇಶ್ ಅಂಚನ್,ದಲಿತ ದಮನಿತರ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮರಾಜ್ ಬಿರ್ತಿ,ದಸಂಸ ಜಿಲ್ಲಾ ಕಾನೂನು ಸಲಹೆಗಾರ ಎಸ್.ವಿಜಯ್,ಸುಧಾಕರ ಗುಜ್ಜರಬೆಟ್ಟು,ಪಂದ್ಯಾವಳಿಯ ನಿರ್ಣಾಯಕರಾದ ರಾಜೇಶ್ ಮತ್ತು ದೀಪಕ್ ಮುಖ್ಯ ಅತಿಥಿಗಳಾಗಿದ್ದರು.

ಸನ್ಮಾನ: ಇದೇ ಸಂದರ್ಭ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ವಿಜೇತರಾದ ಶಂಕರ ನಂಬಿಯಾರ್ ಮತ್ತು ಬೇಬಿ ಟೀಚರ್‍ರವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.

ಧನ ಸಹಾಯ: ಅನಾರೋಗ್ಯ ಪೀಡಿತರಾದ 7 ಮಂದಿಗೆ ಸಂಸ್ಥೆಯ ವತಿಯಿಂದ ಧನ ಸಹಾಯ ವಿತರಿಸಲಾಯಿತು.
ವಸಂತಿ ಕಲ್ಲಟ್ಟೆ ಸ್ವಾಗತಿಸಿದರು.ವಿಠಲ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.