ಉಚ್ಚಿಲ: ಪ್ರಾಣಯಾಮ ಯೋಗ ಶಿಬಿರ ಆರಂಭ

ಪಡುಬಿದ್ರಿ: ಇಲ್ಲಿಗೆ ಸಮೀಪದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಪ್ರಾಣಾಯಾಮ ಯೋಗ ಶಿಬಿರವನ್ನು ಯೋಗ ವಿಸ್ತಾರಕರಾದ ರಾಘವೇಂದ್ರ ರಾವ್ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಇಂದಿರಾ ಎಸ್ ಶೆಟ್ಟಿ ಮಾತನಾಡಿ, ನಿಯಮಿತವಾದ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಒತ್ತಡದ ಬದುಕಿನಲ್ಲಿ ಬೆನ್ನತ್ತುತ್ತಿರುವ ಆನೇಕ ಕಾಯಿಲೆಗಳನ್ನು ದೂರ ಸರಿಸಬಹುದು ಎಂದು ಹೇಳಿದರು.
ಪರಿಸರದ ವಿವಿಧ ಕೇಂದ್ರಗಳಲ್ಲಿ 30 ಸರಣಿ ಶಿಬಿರಗಳನ್ನು ಸಂಯೋಜಿಸಲಾಗಿದ್ದು, 5 ದಿವಸದ ಶಿಬಿರವನ್ನು ಯೋಗ ಪ್ರಚಾರಕಿ ಹಾಗೂ ಯೋಗ ಶಿಕ್ಷಕಿ ವಿಧೀಶಾ ಜೆ. ರಾವ್ ನಡೆಸಿಕೊಟ್ಟರು. ಬಿ.ಎನ್. ಶ್ಯಾಮಲಾ ಸಹಕಾರ ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯರಾದ ಯು.ಸಿ.ಶೇಕಬ್ಬ, ಪಂಚಾಯಿತಿ ಸದಸ್ಯ ಚಂದ್ರಶೇಖರ ಕೋಟ್ಯಾನ್, ಸತೀಶ್ ದೇಜಾಡಿ, ಶಿಬಿರದ ಸಂಯೋಜಕರಾದ ವಸಂತ ದೇವಾಡಿಗ, ಕಮಲಾಕ್ಷ ಶೆಣೈ ವೇದಿಕೆಯಲ್ಲಿದ್ದರು.