ಇಂದು ಹೆಜಮಾಡಿಯಲ್ಲಿ ಟೋಲ್ ವಿರುದ್ಧ ಪ್ರತಿಭಟನೆ

ಮೂಲ್ಕಿಯಲ್ಲಿ ಟೋಲ್ ವಿರುದ್ಧ ಸಮಾಲೋಚನಾ ಸಭೆಯಲ್ಲಿ ನಿರ್ಧಾರ

ಮೂಲ್ಕಿ ಹೆಜಮಾಡಿ ಟೋಲ್ ಪ್ಲಾಝಾದಿಂದ ಕೇವಲ ಒಂದು ಕಿಮೀ ಸನಿಹದಲ್ಲಿರುವ ಮೂಲ್ಕಿಯ ವಾಹನಗಳಿಂದ ಟೋಲ್ ಸಂಗ್ರಹ ಮಾಡುತ್ತಿರುವ ಟೋಲ್ ವಿರುದ್ಧ ಜಯ ಸಿಗುವವರೆಗೆ ಹೋರಾಟ ಮುಂದುವರಿಸಲು ಮೂಲ್ಕಿ ವಾಹನ ಬಳಕೆದಾರರು ನಿರ್ಧರಿಸಿದ್ದು,ಇಂದು(ಜ.2) ಹೆಜಮಾಡಿಯಲ್ಲಿ ಟೋಲ್ ವಿನಾಯಿತಿಗೆ ಆಗ್ರಹಿಸಿ ನಡೆಯುವ ಹೋರಾಟದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಮೂಲ್ಕಿ ಪುನರೂರು ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಮೂಲ್ಕಿ ವ್ಯಾಪ್ತಿಯ ವಾಹನ ಬಳಕೆದಾರರಿಗೆ ಹೆಜಮಾಡಿ ಟೋಲ್‍ನಲ್ಲಿ ಸಂಪೂರ್ಣ ವಿನಾಯಿತಿ ನೀಡುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಲಾಯಿತು.
ಬುಧವಾರ ಬೆಳಿಗ್ಗೆ ಬಪ್ಪನಾಡು ದೇವಳ ಮುಂಭಾಗ 9.30 ಗಂಟೆಗೆ ಒಗ್ಗಟ್ಟಾಗಿ ಹೆಜಮಾಡಿ ಟೋಲ್‍ಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಭೆ ನಿರ್ಧರಿಸಿತು.

ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿಯ ಹಳದಿ ನಂಬರ್ ಪ್ಲೇಟ್ ವಾಹನಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗುತ್ತಿದ್ದು,ಬಿಳಿ ನಂಬರ್ ಪ್ಲೇಟ್ ವಾಹನಗಳಿಗೂ ವಿನಾಯಿತಿ ನೀಡಬೇಕೆಂದು ಆಗ್ರಹಿಸಲಾಗಿದೆ.ಹೆಜಮಾಡಿ ಟೋಲ್‍ನಿಂದ ಸುತ್ತಲಿನ 7 ಕಿಮೀ ವ್ಯಾಪ್ತಿಯ ವಾಹನಗಳಿಗೆ ಕಡ್ಡಾಯವಾಗಿ ಟೋಲ್ ವಿನಾಯಿತಿ ನೀಡಬೇಕೆಂದು ಆಗ್ರಹಿಸಲಾಯಿತು.ಮೂಲ್ಕಿ ಪಡುಪಣಂಬೂರು,ಹಳೆಯಂಗಡಿ ವಾಹನಗಳಿಗೂ ಟೋಲ್ ವಿನಾಯಿತಿ ಬೇಕೆಂದು ತಿಳಿಸಲಾಯಿತು.

ಈ ಬಗ್ಗೆ ಸಂಸದರು,ಶಾಸಕರು,ಜಿಲ್ಲಾಧಿಕಾರಿ,ಎನ್‍ಎಚ್‍ಎ ಮತ್ತು ನವಯುಗ್ ಟೋಲ್ ಕಂಪನಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಮೂಲ್ಕಿಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬದಿಂದ ಹಲವಾರು ಅಪಘಾತಗಳು ಸಂಭವಿಸಿದ್ದು,ಸರ್ವಿಸ್ ರಸ್ತೆ ಕಾಮಗಾರಿ ಸಹಿತ ವಿವಿಧ ಬೇಡಿಕೆಗಳನ್ನೂ ಹಲವು ಬಾರಿ ಸಲ್ಲಿಸಿದ್ದರೂ ಹೆದ್ದಾರಿ ಇಲಾಖೆ ಸ್ಪಂದಿಸಿಲ್ಲ.ಟೋಲ್ ಹೋರಾಟದೊಂದಿಗೆ ಮೂಲ್ಕಿಯ ಹೆದ್ದಾರಿ ಸಮಸ್ಯೆಗಳ ಬಗ್ಗೆಯೂ ಮನವಿ ಮಾಡಲಾಗುವುದು.ಸಾಸ್ತಾನದಲ್ಲಿ ಪ್ರಬಲ ಹೋರಾಟದಿಂದ 7ಕಿಮೀ ವ್ಯಾಪ್ತಿಗೆ ಟೋಲ್ ವಿನಾಯಿತಿ ನೀಡಿದಂತೆ ಹೆಜಮಾಡಿ ಟೋಲ್‍ನಲ್ಲಿಯೂ 7 ಕಿಮೀ ವ್ಯಾಪ್ತಿಗೆ ಟೋಲ್ ವಿನಾಯಿತಿಗೆ ನಿರ್ಣಾಯಕ ಹೋರಾಟದ ಅಗತ್ಯವಿದೆ.ಮೂಲ್ಕಿಯ ಎಲ್ಲಾ ಸಂಘ ಸಂಸ್ಥೆಗಳು ಹೋರಾಟದಲ್ಲಿ ಸಕ್ರಿಯ ಭಾಗವಹಿಸಬೇಕೆಂದು ಅವರು ವಿನಂತಿಸಿದರು.
ಮುಖಂಡರುಗಳಾದ ಮಧು ಆಚಾರ್ಯ,ಹರೀಶ್ ಎನ್.ಪುತ್ರನ್,ಜೀವನ್ ಕೆ.ಶೆಟ್ಟಿ,ಧನಂಜಯ ಕೋಟ್ಯಾನ್ ಮಟ್ಟು,ಮುನೀರ್ ಕಾರ್ನಾಡು,ಅಬ್ದುಲ್ ರಜಾಕ್,ಕಿಶೋರ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು,ಗೋಪಿನಾಥ ಪಡಂಗ,ದೇವಣ್ಣ ನಾಯಕ್,ಸದಾಶಿವ ಹೊಸದುರ್ಗ,ರಂಗನಾಥ ಶೆಟ್ಟಿ,ದೇವಿಪ್ರಸಾದ್ ಮಾನಂಪಾಡಿ,ಕಿಶೋರ್ ಸಾಲ್ಯಾನ್,ಯಾದವ ಕೋಟ್ಯಾನ್,ಶಶೀಂದ್ರ ಸಾಲ್ಯಾನ್,ಉದಯ ಶೆಟ್ಟಿ,ರಮಾನಾಥ ಪೈ,ವೆಂಕಟೇಶ ಹೆಬ್ಬಾರ್,ಬಾಲಚಂದ್ರ ಸನಿಲ್,ಶೈಲೇರ್ಶ ಕುಮಾರ್,ರವೀಶ್ ಕಾಮತ್,ಗಿರೀಶ್ ಪಲಿಮಾರು,ವೇದವ್ಯಾಸ ಬಂಗೇರ,ಸಾದಿಕ್ ಕಾರ್ನಾಡು,ಗೋಪಾಲಕೃಷ್ಣ ಭಟ್,ನವೀನ್‍ರಾಜ್,ಸುಜನ್ ಕಾರ್ನಾಡು,ವಿಠಲ ಎನ್‍ಎಮ್,ರಿಯಾಝ್ ಕಾರ್ನಾಡು ಉಪಸ್ಥಿತರಿದ್ದರು.