ಇಂಗ್ಲೀಷ್ ಮಾಧ್ಯಮ ಶಾಲೆಗಳಾದರೂ ಅಲ್ಲಿನ ಮಕ್ಕಳು ಸ್ಪಷ್ಟವಾಗಿ ಕನ್ನಡ ಕಲಿಯುವಂತಾಗಬೇಕು

ಪಡುಬಿದ್ರಿ: ಇಂಗ್ಲೀಷ್ ಮಾಧ್ಯಮ ಶಾಲೆಗಳಾದರೂ ಅಲ್ಲಿನ ಮಕ್ಕಳು ಸ್ಪಷ್ಟವಾಗಿ ಕನ್ನಡ ಕಲಿಯುವಂತಾಗಬೇಕು ಎಂದು ಜೇಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರ ಹಾಗೂ ಇನ್ನಾ ಎಂ.ವಿ.ಶಾಸ್ತ್ರಿ ಪ್ರೌಢಶಾಲೆ ಶಿಕ್ಷಕ ಕೆ. ರಾಜೇಂದ್ರ ಭಟ್ ಸಲಹೆ ನೀಡಿದರು.
ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಿಂದಿನ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಅನುಮತಿ ನೀಡಿ ಕೈತೊಳೆದುಕೊಂಡಿತು. ಆಂಗ್ಲ ಮಾಧ್ಯಮ ತೆರೆಯಲು ಅವಕಾಶ ನೀಡಿದರೆ ಸಾಲದು. ಅದಕ್ಕೆ ಅವಶ್ಯವಿರುವ ಶಿಕ್ಷಕರು, ಅವರಿಗೆ ಸೂಕ್ತ ತರಬೇತಿ ನೀಡುವ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕು ಎಂದು ಅವರು ಅಭಿಪ್ರಾಯಿಸಿದರು.

ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಜನಾರ್ದನ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಪಾದೆಬಳಿ ಹರಿಶ್ಚಂದ್ರ ರಾವ್ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬಹುಮಾನ ವಿತರಿಸಲಾಯಿತು.

ನಂದಿಕೂರು ಎಜುಕೇಶನ್ ಟ್ರಸ್ಟ್ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ಶಾಲೆಯ ನೂತನ ಕಟ್ಟಡಕ್ಕೆ ಸಹಾಯಧನ ಯಾಚನೆಯ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಶಾಸಕ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟಾರ್ಡೋ, ಸದಸ್ಯೆ ಸೌಮ್ಯಲತಾ ಶೆಟ್ಟಿ, ನಂದಿಕೂರು ಎಜುಕೇಶನ್ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಅನಿಲ್ ಎಸ್ ಶೆಟ್ಟಿ ಏಳಿಂಜೆ, ನಂದಿಕೂರು ಶ್ರೀ ರಾಮ ದೇವಸ್ಥಾನದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಆಚಾರ್ಯ, ಆಂಗ್ಲ ಮಾಧ್ಯಮ ವಿಭಾಗ ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಶಾಲಾ ನಾಯಕಿ ಅರ್ಚನಾ ಉಪಸ್ಥಿತರಿದ್ದರು.
ಪ್ರೀತಿ ಸ್ವಾಗತಿಸಿದರು. ನಂದಿಕೂರು ಎಜುಕೇಶನ್ ಟ್ರಸ್ಟ್ ನಿರ್ದೇಶಕ ಲಕ್ಷ್ಮಣ ಎಲ್.ಶೆಟ್ಟಿವಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯಿನಿ ವಿಮಲಾ ಕೆ. ವರದಿ ವಾಚಿಸಿದರು. ಸುಪ್ರೀತಾ ಸಂದೇಶ ವಾಚಿಸಿದರು. ಸಿಎ ಅನಿಲ್ ಶೆಟ್ಟಿ ವಿಜ್ಞಾಪನಾ ಪತ್ರದ ವಿವರ ನೀಡಿದರು. ಆಂಗ್ಲ ಮಾಧ್ಯಮ ವಿಭಾಗ ಸಂಯೋಜಕಿ ಅನಿತಾ ವಂದಿಸಿದರು. ಸೌಮ್ಯ ಶೆಟ್ಟಿ ಹಾಗೂ ನಾಗರಾಜ ರಾವ್ ನಂದಿಕೂರು ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿಶೇಷವಾಗಿ ಕನ್ನಡ ಮಾದ್ಯಮ ವಿಭಾಗದ ಶಿಕ್ಷಕರು ಪ್ರಸ್ತುತ ಪಡಿಸಿದ ತುಳುನಾಡ ವೈಭವ ಹಾಗೂ ಆಂಗ್ಲ ಮಾಧ್ಯಮ ವಿಭಾಗ ಶಿಕ್ಷಕಿಯರ ತಾನಿ ತಂದಾನ ಯಕ್ಷಗಾನ ನೃತ್ಯ ಎಲ್ಲರ ಗಮನ ಸೆಳೆಯಿತು.