ಆ. 2: ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ

ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ತೆಂಗಿನ ಕಾಯಿ ಒಡೆದು ಅರ್ಪಿಸಿ, ಭಕ್ತರಿಗೆ ಹಂಚಿಕೆ

ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ದ್ವೈವಾರ್ಷಿಕ ಢಕ್ಕೆಬಲಿ ಸೇವೆಯ ಮೂಲಕ ಜಗತ್ಪ್ರಸಿದ್ಧಿ ಪಡೆದ ಪಡುಬಿದ್ರಿ ಶ್ರೀ ಕ್ಷೇತ್ರ ಬ್ರಹ್ಮಸ್ಥಾನದಲ್ಲಿ ವರ್ಷಂಪ್ರತಿ ತುಳುವರ ಆಟಿ ತಿಂಗಳಲ್ಲಿ ಒಂದು ದಿನ ನಡೆಯುವ “ಅಜಕಾಯಿ ಸೇವೆ”ಯೂ ಪ್ರಸಿದ್ಧಿ ಪಡೆದಿದೆ.

ಇಲ್ಲಿ ಈ ಬಾರಿ ಅಗಸ್ಟ್ 2 ಶುಕ್ರವಾರ ಅಜಕಾಯಿ ಸೇವೆಯು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ಇದು ಇಲ್ಲಿಯ ವಿನಹ ಅವಿಭಜಿತ ದ.ಕ. ಜಿಲ್ಲೆಯ ಎಲ್ಲಿಯೂ ಕಾಣಸಿಗದು. ಆಧುನೀಕತೆಯ ಇಂದಿನ ಕಾಲಘಟ್ಟದಲ್ಲಿ ಪುರಾತನ ಪರಂಪರೆ ಹಾಗೂ ಆರಾಧನಾ ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಸನ್ನಿಧಾನಗಳಲ್ಲಿ ಪಡುಬದ್ರಿ ಬ್ರಹ್ಮಸ್ಥಾನವೂ ಒಂದು.

ತುಳುವರ ಆಟಿ ತಿಂಗಳ 16ನೇ ದಿನದಂದು ಇದು ಪ್ರತೀ ಬಾರಿ ಇಲ್ಲಿ ನಡೆಯುತ್ತದೆ. ಅಂದು ದೇವತಾ ಪ್ರಾರ್ಥನೆಯ ಬಳಿಕ ಸಹಸ್ರಾರು ತೆಂಗಿನ ಕಾಯಿಗಳನ್ನು ಇಲ್ಲಿನ ಪಾತ್ರಿಗಳು ಕ್ಷೇತ್ರಪಾಲ ಕಲ್ಲಿಗೆ ಒಡೆದು ಪ್ರಾಕೃತಿಕ ವನಸಿರಿಯ ನಡುವೆ ನೆಲೆ ನಿಂತಿರುವ ಖಡ್ಗೇಶ್ವರೀ ದೇವಿಗೆ ಅರ್ಪಿಸಿ ಆಗಮಿಸಿದ ಭಕ್ತರಿಗೆ ಹಂಚುತ್ತಾರೆ.

ಸಮುದ್ರದ ಮರಳೇ ಇಲ್ಲಿ ಪ್ರಸಾದ

ಆಸನವಿಶೇಷವಾದ ಈ ಅಜಕಾಯಿ ಸೇವೆಯು ದಿನದಂದು ಮುಂಜಾವ ಇಲ್ಲಿನ ದೇವಕಾರ್ಯ ನಿರತರು ಶುಭ್ರರಾಗಿ ಸಮುದ್ರ ತಟಕ್ಕೆ ತೆರಳಿ ಅಲ್ಲಿಂದ ತಮ್ಮ ಸೊಂಟಮಟ್ಟದ ನೀರಲ್ಲಿನ ಮರಳನ್ನು ಸಂಗ್ರಹಿಸಿ ಬ್ರಹ್ಮಸ್ಥಾನಕ್ಕೆ ತರುತ್ತಾರೆ. ಇದಕ್ಕಾಗಿ ಇವರೊಂದಿಗೆ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮೂಹದ ಯುವಕರು ಸಹಕರಿಸುತ್ತಾರೆ. ಇವರೆಲ್ಲರೂ ಒಟ್ಟಾಗಿ ದೇವತಾ ಪ್ರಾರ್ಥನೆಯೊಂದಿಗೆ ಸಮುದ್ರದ ಮರಳನ್ನು ತಂದು ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಖಡ್ಗೇಶ್ವರಿಯ ಮೂಲ ಬಿಂಬವಿರುವಲ್ಲಿಗೆ ಹಾಗೂ ಬ್ರಹ್ಮಸ್ಥಾನದೊಳಗಿನ ನಾಗನ ಸನ್ನಿಧಿ ಸಹಿತ ಪರಿಸರದಲ್ಲೆಲ್ಲಾ ಹರಡುತ್ತಾರೆ. ಮುಂದೆ ಒಂದು ವರ್ಷ ಕಾಲ ಇಲ್ಲಿ ನೆರೆವ ಭಕ್ತರಿಗೆ ಇದೇ ಖಡ್ಗೇಶ್ವರೀ ಮಾತೆಯ ಪ್ರಸಾದವೂ ಆಗುತ್ತದೆ. ಅವರಿಗೆಲ್ಲಾ ಮರಳೇ ಪ್ರಸಾದವೂ, ಮರಳೇ ಆಸನವೂ ಆಗಿರುತ್ತದೆ.

ವನಸಿರಿಯೇ ಸೊಬಗು, ವಿದ್ವಾಂಸರಿಗಿದು ಆಕರ
ಸಹಸ್ರಾರು ಭಕ್ತರನ್ನು ಆಕರ್ಷಿಸುವ ಈ ತಾಣವು ಗುಡಿ, ಗೋಪುರಗಳಿಲ್ಲದೆಯೇ ವನಸಿರಿಯ ನಡುವೆ ಶೋಭಿಸುತ್ತಿದೆ. ಕಾಣಿಕೆಯ ಹುಂಡಿಗಳಿಲ್ಲದ, ವಿದ್ಯುದ್ದೀಪದ ವ್ಯವಸ್ಥೆಯನ್ನು ಕಾಣದ, ಕಲ್ಲ ಗರ್ಭಗುಡಿ, ಅಂಬೆಲಗಳ ರಚನೆಗಳಿರದ ಈ ಪಂಚದೈವೀಕ ತಾಣದಲ್ಲಿ ಅತೀ ಸಾಮಾನ್ಯವಾಗಿರುವ ಕಟ್ಟುಕಟ್ಟಳೆಗಳಂತೆಯೇ ಯಾವತ್ತೂ ಕೆಲಸ ಕಾರ್ಯಗಳು, ಆರಾಧನೆಗಳು ತೊಡಕಿಲ್ಲದೇ ನಡೆಯುತ್ತವೆ. ಫೆÇೀಟೋ, ವೀಡಿಯೋಗಳನ್ನು ಕ್ಲಿಕ್ಕಿಸಿಕೊಳ್ಳಲಾರದ ಈ ಪ್ರಶಾಂತ ತಾಣಕ್ಕೆ ಈ ಹಿಂದೆ ಪಾಶ್ಚಾತ್ಯ ವಿದ್ವಾಂಸರೂ ಆಗಮಿಸಿ ಇಲ್ಲಿನ ಡಾಕ್ಯುಮೆಂಟರಿಗಳನ್ನೂ ರಚಿಸಿಕೊಂಡಿದ್ದಾರೆ.

ಅಜಕಾಯಿ ಬಳಿಕ ಪ್ರಸಾದ ವಿತರಣೆ

ಇಲ್ಲಿನ ಸ್ಧಾನಿಗಳ, ಮಾನಿಗಳ ಮತ್ತು ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮ್ಮುಖದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆಯ ನಂತರ ಜಿಲ್ಲೆಯ ಮೂಲೆ, ಮೂಲೆಗಳಿಂದ ಆಗಮಿಸುವ ಭಕ್ತರ ಹರಕೆಯ ತೆಂಗಿನ ಕಾಯಿಗಳು ಸುಮಾರು 15000ದಷ್ಟು ಸಂಖ್ಯೆಯಲ್ಲಿರುತ್ತವೆ. ಇವುಗಳಲ್ಲಿ ಅಜಕಾಯಿ ಸೇವೆಗೆ ಬಂದ ತೆಂಗಿನಕಾಯಿಗಳನ್ನು ಅಜಕಾಯಿ ಕಲ್ಲಿಗೆ ಇಲ್ಲಿನ ಪಾತ್ರಿಗಳೇ ಒಡೆಯಬೇಕೆಂಬ ಕಟ್ಟಳೆಯಿದೆ. ದೇವರಿಗೆ ಸಮರ್ಪಿಸಲು ಬರುವ ಕಾಯಿಗಳನ್ನು ಯುವಕರು ಒಡೆದು ಪೇರಿಸಿಡುತ್ತಾರೆ. ಬಂದು ಸೇರುವ ಅಜಕಾಯಿ ತೆಂಗಿನ ಕಾಯಿಗಳನ್ನು ಒಡೆದು ಮುಗಿಸುವ ವೇಳೆ ಮಧ್ಯಾಹ್ನ ಕಳೆದಿರುತ್ತದೆ. ಬಳಿಕ ದೇವರಿಗೆ ಪೂಜೆ, ಪ್ರಾರ್ಥನೆಗಳ ಬಳಿಕ ಪ್ರಸಾದ ವಿತರಣೆಯೊಂದಿಗೆ ಬ್ರಹ್ಮಸ್ಥಾನದಲ್ಲಿ ಮಳೆಗಾಲದ ಪ್ರಕೃತ್ಯಾರಾಧಾನೆಯೂ ಸಂಪನ್ನಗೊಳ್ಳುತ್ತದೆ.