ಆಸ್ಪತ್ರೆಗಳಲ್ಲಿ ಸರಕಾರಿ ಸವಲತ್ತುಗಳನ್ನು ಅರ್ಹರಿಗೆ ಸುಲಲಿತವಾಗಿ ಒದಗಿಸಬೇಕು-ಸಚಿವ ಯು.ಟಿ.ಖಾದರ್

ಮೂಲ್ಕಿ: ರಾಜ್ಯ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ಸರಕಾರಿ ಸವಲತ್ತು ರೋಗಿಗಳ ಸಹಾಯಕ್ಕಾಗಿ ಪ್ರಥಮ ಆದ್ಯತೆಯಲ್ಲಿ ವಿನಿಯೋಗವಾಗಬೇಕು.ಮೂಲ್ಕಿಯಲ್ಲಿ ಉತ್ತಮ ಆಸ್ಪತ್ರೆ ಎಂದು ಜನರು ಮೆಚ್ಚಿಕೊಳ್ಳವ ಹಾಗೆ ವೈದ್ಯರು ಸಹಕರಿಸಬೇಕು ಎಂದರು.

ಈ ಸಂದರ್ಭ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಪೂರ್ಣಿಮಾ ಜೆ.ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.ಈ ಪ್ರದೇಶದಲ್ಲಿ ರಕ್ತ ನಿಧಿ ಕೇಂದ್ರವಿಲ್ಲ.ಮಂಗಳೂರಿನಿಂದ ತರಿಸಿ ಇಲ್ಲಿರಿಸಲು ಸೂಕ್ತ ವ್ಯವಸ್ಥೆಗಳಿಲ್ಲ.ಡಯಾಲಿಸಿಸ್ ಕೇಂದ್ರದ ಅಗತ್ಯವಿದೆ.ಇಲ್ಲಿ ಅರಿವಳಿಕೆ ತಜ್ಞರಿಲ್ಲದ ಕಾರಣ ಅಪರೇಶನ್ ಸಮಸ್ಯೆಯಾಗಿದೆ.ರಾತ್ರಿ ಕೆಲವರು ಕುಡಿದು ರಂಪ ಮಾಡುವುದಿದೆ.ಮಹಿಳೆಯರೇ ಇರುವ ಕಾರಣ ಸಮಸ್ಯೆಯಾಗುತ್ತದೆ ಎಂಬ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ಸದ್ಯ ಇರುವ ಹಣವನ್ನು ವೈದ್ಯಕೀಯ ವ್ಯವಸ್ಥೆಗಳಿಗೆ ತಕ್ಕಂತೆ ವಿನಿಯೋಗಿಸಬೇಕು.ಹೆಚ್ಚುವರಿ ಅನುದಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಆಸ್ಪ್ರತೆಯ ಎಲ್ಲಾ ವಾರ್ಡುಗಳಿಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಯ ಅಚ್ಚುಕಟ್ಟಾದ ವ್ಯವಸ್ಥೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಕೆಲವು ಔಷದಗಳ ಬಗ್ಗೆ ಹಣ ಪಡೆದಿದ್ದಾರೆ ಹಾಗೂ ಇದಕ್ಕೆ ರಸೀದಿ ನೀಡುತ್ತಿಲ್ಲ ಎಂದು ಸ್ಥಳೀಯರು ಸಚಿವರಲ್ಲಿ ದೂರಿದರು.ಇದಕ್ಕೆ ಸ್ಪಷ್ಟೀಕರಣ ಕೇಳಿದಾಗ ಇಲ್ಲಿ ಔಷದ ಲಭ್ಯವಿರದ ಸಂದರ್ಭ ಹೊರಗಿನ ಖಾಸಗಿ ಮೆಡಿಕಲ್‍ನಿಂದ ತರಿಸುವಾಗ ಹಣ ನೀಡಬೇಕಾಗುತ್ತದೆ.ಇದೀಗ ಎಲ್ಲಾ ಔಷಧಗಳು ಲಭ್ಯವಿದೆ ಅದನ್ನು ಉಚಿತವಾಗಿ ನೀಡಲಾಗುವುದು ಎಂದು ವೈದ್ಯರು ತಿಳಿಸಿದರು.
ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್,ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು,ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್,ಮೂಲ್ಕಿ ನಗರ ಪಂಚಾಯಿತಿ ಸದಸ್ಯರಾದ ಬಿಎಂ.ಆಸೀಪ್,ಪುತ್ತು ಬಾವು,ಹಸನ್ ಬಶೀರ್ ಕುಲಾಯಿ,ವಿಮಲಾ ಪೂಜಾರಿ,ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕೃಷ್ಣ,ಸ್ತ್ರೀರೋಗ ತಜ್ಞೆ ಡಾ.ಪೂರ್ಣಿಮಾ.ಜೆ,ಡೆಂಟಿಸ್ಟ್ ಡಾ.ಜ್ಯೋತಿ,ಜನರಲ್ ಫಿಜಿಶಿಯನ್ ಡಾ.ಜಗದೀಶ್,ಎಕ್ಸ್ ರೇ ಟೆಕ್ನೀಶಿಯನ್ ದಿನೇಶ್ ಮತ್ತಿತರರಿದ್ದರು.