ಆರೋಗ್ಯವಂತರಾಗುವ ಮೂಲಕ ದೇಶಾಭಿವೃದ್ಧಿ-ರಾಘವೇಂದ್ರ ರಾವ್

ಮೂಲ್ಕಿ: ನಿರಂತರ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತರಾದಲ್ಲಿ ದೇಶಾಭಿವೃದ್ಧಿ ಸುಲಲಿತವಾಗುತ್ತದೆ ಎಂದು ಬಪ್ಪನಾಡು ಪತಂಜಲಿ ಯೋಗ ಸಮಿತಿಯ ಯೋಗ ಗುರು ರಾಘವೇಂದ್ರ ರಾವ್ ಹೇಳಿದರು.

ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡುವಿನ ಪತಂಜಲಿ ಯೋಗ ಸಮಿತಿ ವತಿಯಿಂದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಭಾನುವಾರ ಮುಂಜಾನೆ ಗುರು ಪೂರ್ಣಿಮೆ ಅಂಗವಾಗಿ ನಡೆದ ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕೆಲಸ ಆರಂಭಿಸುವಾಗ ಒಳ್ಳೆಯ ಮನಸ್ಸಿನಿಂದ ಮಾಡಿದರೆ ಉತ್ತಮ ಪ್ರತಿಫಲ ಸಾಧ್ಯ ಎಂದ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಗೆ ಭಗವಂತನ ಅನುಗ್ರಹ ಲಭ್ಯವಾಗುತ್ತದೆ. ಬಪ್ಪನಾಡುವಿನಲ್ಲಿ ನಿರಂತರ 5 ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ: ಇದೇ ಸಂದರ್ಭ ಯೋಗ ಗುರುಗಳಾದ ರಾಘವೇಂದ್ರ ರಾವ್‍ರವರನ್ನು ಸುನೀತಾ ದಾಮೋದರ್, ಆಶಾ ಕಾಮತ್, ಕುಸುಮಾ ರವೀಂದ್ರ ಶೆಟ್ಟಿ ಮತ್ತು ವಾರಿಜ ವಾಸು ಪುತ್ರನ್ ಸನ್ಮಾನಿಸಿದರು. ಸತೀಶ್ ಅಂಚನ್, ಸತೀಶ್ ಪುತ್ರನ್, ಉದಯ ಶೆಟ್ಟಿ ಮತ್ತು ಶಿವಶಂಕರ್ ಶೆಟ್ಟಿ ಗುರುವಂದನೆಗೈದರು. ಇದೇ ಸಂದರ್ಭ ಸಹಗುರು ಸತೀಶ್ ಬೈಂದೂರುರವರನ್ನು ಗೌರವಿಸಲಾಯಿತು.

ಪ್ರಕಾಶ್ ಕೃಷ್ಣಾಪುರ ಗುರು ಪೂರ್ಣಿಮೆ ಮಹತ್ವದ ಬಗ್ಗೆ ಉಪನ್ಯಾಸಗೈದರು. ಲತಾಮಣಿ ಶುಭಾಶಂಸನೆಗೈದರು. ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಶಾಂತಾರಾಮ್ ಉಪಸ್ಥಿತರಿದ್ದರು. ರಾಮದಾಸ ಕಾಮತ್ ವಂದಿಸಿದರು.