ಅವಿಭಜಿತ ದಕ ಜಿಲ್ಲೆಯಲ್ಲಿ ಪ್ರತ್ಯೇಕ ನೀರಾ ಘಟಕ-ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅವಿಭಜಿತ ದಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ವತಿಯಿಂದ ಅಭಿನಂದನೆ

ಪಡುಬಿದ್ರಿ:: ಅವಿಭಜಿತ ದಕ ಜಿಲ್ಲೆಯ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರತ್ಯೇಕ ನೀರಾ ಘಟಕ ಆರಂಭಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅದಕ್ಕಾಗಿ ತಲಾ ಒಂದು ಕೋಟಿ ಬಿಡುಗಡೆ ಮಾಡಿ, ಶೇಂದಿಯನ್ನು ನೀರಾ ಆಗಿ ಪರಿವರ್ತಿಸಿ ಆದಾಯ ಹೆಚ್ಚಿಸಲು ಸಾಧ್ಯವಿದ್ದಲ್ಲಿ ಅದಕ್ಕೆ ಬೇಕಾದ ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನುವಾರ ಪಡುಬಿದ್ರಿಯ ಸಾಯಿ ಆರ್ಕೇಡ್ ಸಂಕೀರ್ಣದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಹಾಗೂ ಉಭಯ ಜಿಲ್ಲಾ ಸಮಸ್ತ ಮೂರ್ತೆದಾರರ ಸಹಕಾರಿ ಸಂಘಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಬಗ್ಗೆ ತಕ್ಷಣ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಲ್ಲಿ ಮಾತುಕತೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಶೇಂದಿಯನ್ನು ಸಂಸ್ಕರಿಸಿ ಅತ್ಯಾಧುನಿಕ ರೀತಿಯಲ್ಲಿ ಮಾರಾಟ ಮಾಡಲು ಬೇಕಾದ ಯೋಜನೆ ರೂಪಿಸಿಕೊಳ್ಳಬೇಕು. ಅದಕ್ಕಾಗಿ ಮೂರ್ತೆದಾರರ ನಿಯೋಗ ಬೆಂಗಳೂರಿಗೆ ಬಂದಲ್ಲಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಅವಿಭಜಿತ ಜಿಲ್ಲೆಯಲ್ಲಿ ತೆಗೆಯುವ ಶೇಂದಿಯನ್ನು ನೀರಾ ಆಗಿ ಮಾರಾಟ ಮಾಡಲು ಅವಕಾಶ Pಲ್ಪಿಸಲಾಗುವುದು ಎಂದವರು ಭರವಸೆ ನೀಡಿದರು.

ಮೂರ್ತೆದಾರರಿಗೆ ಯಾವುದೇ ರೀತಿ ಕಿರುಕುಳ ಆಗದಂತೆ ಸರ್ಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಕಲ್ಪತರು ಮಹಿಳಾ ಸ್ವಸಹಾಯ ಸಂಘಗಳಿಗೆ ನಿಬಡ್ಡಿ ಸಾಲವನ್ನು ನಾರಾಯಣಗುರು ನಿಗಮ ಮತ್ತು ಮೂರ್ತೆದಾರರ ಮಹಾಮಂಡಲ ಮೂಲಕ ನೀಡಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿದೆ. ಯಾವುದು ಅನುಕೂಲ, ಯಾವುದು ಹೆಚ್ಚು ಸರಿ ಎಂದು ತುಲನೆ ಮಾಡಿ ಯೋಜನೆ ಕಾರ್ಯಗತ ಮಾಡಲಾಗುವುದು ಎಂದವರು ಹೇಳಿದರು.
ಬೆಳ್ಳಿಯ ಕಡುಗತ್ತಿಯೊಂದಿಗೆ ಸನ್ಮಾನ: ಸಮಾರಂಭದಲ್ಲಿ ಬೆಳ್ಳಿಯ ಕುಡುಗತ್ತಿ ನೀಡಿ ಸಚಿವರನ್ನು ಸನ್ಮಾನಿಸಲಾಯಿತು. ಮೂರ್ತೆದಾರರ ಚಳುವಳಿಯ ನೇತಾರ ಮಾಣಿ ಗೋಪಾಲ ಕುಂದಾಪುರ ಅಭಿನಂದನಾ ಭಾಷಣ ಮಾಡಿದರು. ಧನಂಜಯ ಕೊಲ್ಯ ಭಾಮಿನಿ ಷಠ್ಪದಿಯಲ್ಲಿ ಸಚಿವರನ್ನು ಪರಿಚಯಿಸಿದರು. ವಿಜಯಕುಮಾರ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು.

ಸಚಿವರಿಗೆ ಮನವಿ: ಮೂರ್ತೆದಾರರ ಮಹಾಮಂಡಲ ಹಾಗೂ ಸಹಕಾರಿ ಸಂಘಗಳನ್ನು ಬಲಪಡಿಸಲು ರೂ. 10 ಕೋಟಿ ಸಹಾಯಧನವನ್ನು ಸರ್ಕಾರ ತಕ್ಷಣ ಮಂಜೂರು ಮಾಡಬೇಕು. ಮೂರ್ತೆದಾರರ ಸಹಕಾರಿ ಸಂಘಗಳ ಶೇಂದಿ ಮಾರಾಟ ಕೇಂದ್ರಗಳಿಗೆ ಸುಲಭ ಹಾಗೂ ಶೀಘ್ರ ಪರವಾನಿಗೆ ನೀಡಬೇಕು. ಅದರ ಕಾರ್ಯಕ್ಷೇತ್ರದಲ್ಲಿ ಸರ್ಕಾರಿ ಜಮೀನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು. ಮೂರ್ತೆದಾರರನ್ನು ಅಸಂಘಟಿ ಕಾರ್ಮಿಕರೆಂದು ಪರಿಗಣಿಸಿ, ಸರ್ಕಾರದಿಂದ ದೊರಕುವ ಎಲ್ಲಾ ಸವಲತ್ತುಗಳನ್ನು ನೀಡಬೇಕು. ಸಮಾಪನಗೊಂಡ ತಾಳೆಬೆಲ್ಲ ಸಹಕಾರಿ ಸಂಘದ ನಿಧಿಯನ್ನು ಸಂಬಂಧಪಟ್ಟ ಮೂರ್ತೆದಾರರ ಮಹಾಮಂಡಲ ಅಥವಾ ಸಹಕಾರಿ ಸಂಘಗಳಿಗೆ ವರ್ಗಾಯಿಸಲು ಸಹಕಾರಿ ಸಂಘಗಳ ಉಪನಿಬಂಧಕರಿಗೆ ಆದೇಶಿಸಬೇಕು ಎಂಬ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಕೊರಗ ಪೂಜಾರಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮೂರ್ತೆದಾರರ ಚಳುವಳಿಯ ನೇತಾರ ನಾರಾಯಣ ಪೂಜಾರಿ ಮೂಡುಪೆರಾರ, ದಕ್ಷಿಣಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಉಪಾಧ್ಯಕ್ಷ ಶಿವಪ್ಪ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಉಪಾಧ್ಯಕ್ಷ ಪಿ.ಕೆ. ಸದಾನಂದ ಸ್ವಾಗತಿಸಿದರು. ಜಗದೀಶ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ವಂದಿಸಿದರು.

ಫೋಟೋ: ಪಡುಬಿದ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಳ್ಳಿಯ ಕಡುಗತ್ತಿ ನೀಡಿ ಅಭಿನಂದಿಸಿಲಾಯಿತು.