ಅಮ್ಮನ ಮಡಿಲಿಗೆ- ಮಕ್ಕಳ ನಡಿಗೆ ಭಜನಾ ಪಾದಯಾತ್ರೆ

ಮೂಲ್ಕಿ; ಮೂಲ್ಕಿ ಸಮೀಪದ ಕೆಂಚನಕೆರೆಯ ಅಂಗರಗುಡ್ಡೆ ಭಗತ್ ಸಿಂಗ್ ಯುವಕ ವೃಂದದ ವತಿಯಿಂದ ಭಾನುವಾರ ಲೋಕಕಲ್ಯಾಣಾರ್ಥ “ಅಮ್ಮನ ಮಡಿಲಿಗೆ-ಮಕ್ಕಳ ನಡಿಗೆ” ಭಜನಾ ಸಂಕೀರ್ತನಾ ಪಾದಯಾತ್ರೆ ನಡೆಯಿತು.

ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಿಂದ ಸಾಮೂಹಿಕ ಪ್ರಾರ್ಥನೆಯ ಬಳಿಕ ಭಜನಾ ಸಂಕೀರ್ತನೆಯೊಂದಿಗೆ ಹೊರಟು, ಶಿಮಂತೂರು ಶ್ರೀ ಆದಿ ಜನಾರ್ಧನ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಿನ ಭಜನಾ ಮಂಡಳಿಯೊಂದಿಗೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಗೆ ಮೆರವಣಿಗೆ ಮೂಲಕ ಬರಲಾಯಿತು. ಭಜನಾ ಸಂಕೀರ್ತನೆಯ ಪಾದಯಾತ್ರೆಯು ಬಪ್ಪನಾಡಿ ಆಗಮಿಸಿದ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿಯವರು ಸ್ವಾಗತಿಸಿದರು.

ಅಂಗರಗುಡ್ಡೆ ರಾಮನಗರದ ಶ್ರೀ ರಾಮ ಭಜನಾ ಮಂಡಳಿ ಮತ್ತು ಮಹಿಳಾ ಮಂಡಳಿ, ಶಿಮಂತೂರು ಶ್ರೀ ಆದಿ ಜನಾರ್ಧನ ಸೇವಾ ಯುವಕ ಮಂಡಲ, ಕಿಲ್ಪಾಡಿ-ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನ ಮತ್ತು ಕಿಲ್ಪಾಡಿ ಶ್ರೀ ದುರ್ಗಾದೇವಿ ಭಜನಾ ಮಂದಿರದ ಸದಸ್ಯರು ಭಜನಾ ಸಂಕೀರ್ತನಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.