ಅಪಘಾತದಿಂದ ದುರ್ಮರಣ ಹೊಂದಿದ ಯುವಕನ ಕುಟುಂಬಕ್ಕೆ ನೆರವು

ಗ್ಯಾರೇಜ್ ಮಾಲಕರು ಹಾಗೂ ಕಾರ್ಮಿಕರಿಂದ ರೂ.1.22 ಲಕ್ಷ ಚೆಕ್ ಹಸ್ತಾಂತರ

ಪಡುಬಿದ್ರಿ: ಇಲ್ಲಿನ ಗ್ಯಾರೇಜ್ ಒಂದರ ಕಾರ್ಮಿಕನಾಗಿದ್ದು ಬೈಕ್ ಅಪಘಾತದಲ್ಲಿ ಮೃತಪಟ್ಟ ಬಡ ಕುಟುಂಬಕ್ಕೆ, ದ.ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಸದಸ್ಯರು ಸಹಿತ ಗ್ಯಾರೇಜ್ ಕಾರ್ಮಿಕರು ಒಂದಾಗಿ ಸಂಗ್ರಹಿಸಿದ 1ಲಕ್ಷ 22 ಸಾವಿರ ರೂಪಾಯಿ ದೇಣಿಗೆಯನ್ನು ಚೆಕ್ ಮೂಲಕ ಮೃತನ ಹೆತ್ತವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಗ್ಯಾರೇಜ್ ಮಾಲಕ ಸುರೇಶ್ ಪೂಜಾರಿ ಎಂಬವರು, 24ರ ಹರೆಯದ ಅಶ್ವಿತ್ ಪೂಜಾರಿ ಮುಂಜಾನೆ ಎದ್ದು ಮನೆ ಮನೆಗೆ ಸುದ್ಧಿ ಪತ್ರಿಕೆ ವಿತರಿಸಿ, ಆ ಬಳಿಕ ಗ್ಯಾರೇಜ್‍ನಲ್ಲಿ ದುಡಿದು ಹೃದಯ ಸಂಬಂಧಿ ಖಾಯಿಲೆ ಹೊಂದಿದ್ದ ತಾಯಿ, ಕಣ್ಣಿನ ತೊಂದರೆ ಅನುಭವಿಸುತ್ತಿರುವ ತಂದೆ ಹಾಗೂ ತಮ್ಮನ ವಿದ್ಯಾಭ್ಯಾಸಕ್ಕೆ ಆಧಾರವಾಗಿದ್ದ ಮಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ, ಇದೀಗ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಆತನ ಕುಟುಂಬಕ್ಕೆ ಒಂದಿಷ್ಟು ನೆರವು ನೀಡುವ ನಿಟ್ಟಿನಲ್ಲಿ, ಎಲ್ಲಾ ನಮ್ಮ ಸಹದ್ಯೋಗಿಗಳನ್ನು ಸೇರಿಸಿ ಸಭೆ ನಡೆಸಿ ಅದರ ನಿರ್ಣಯದಂತೆ ಎಲ್ಲಾರೂ ಸೇರಿ ದೇಣಿಗೆ ಸಂಗ್ರಹಿಸುವ ಮೂಲಕ 1ಲಕ್ಷ 22 ಸಾವಿರ ರೂಪಾಯಿ ಸಂಗ್ರಹವಾಗಿದ್ದು, ಆ ಮೊತ್ತವನ್ನು ಇದೀಗ ಅವರ ಮನೆ ಅಬ್ಬೇಡಿಗೆ ತೆರಳಿ ಮೃತನ ತಂದೆ ತಾಯಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದೇವೆ ಎಂದರು.

ಈ ಸಂದರ್ಭ ಮಗನಿಲ್ಲದ ನೋವಿನಿಂದ ಬಾಧಿತರಾದ ತಾಯಿ ಸಹದ್ಯೋಗಿಗಳ ಮುಂದೆಯೇ ಕಣ್ಣೀರಿಟ್ಟರು.
ಸಂಸ್ಥೆಯ ಪ್ರಮುಖರಾದ ಸಂದೀಪ್ ಸುವರ್ಣ, ರೋಶನ್ ಕರ್ಕಡ, ಸುಧೀರ್, ಸಂತೋಷ್, ಪ್ರಶಾಂತ್ ಉಚ್ಚಿಲ, ಮಧು ಮುಂತಾದವರು ಉಪಸ್ಥಿತರಿದ್ದರು.

ಫೋಟೋ: ದ.ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಸದಸ್ಯರು ಚೆಕ್ ಹಸ್ತಾಂತರಿಸಿದರು.