ಅದಾನಿ ಸಮೂಹದ ಅಧ್ಯಕ್ಷರಾಗಿ ಕಿಶೋರ್ ಆಳ್ವ ಪದೋನ್ನತಿ

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಜಂಟಿ ನಿರ್ದೇಶಕರಾದ ಕಿಶೋಲ್ ಆಳ್ವರನ್ನು ದೇಶದ ವ್ಯಾಪಾರೀಕ ಕ್ಷೇತ್ರದ ಮುಂಚೂಣಿಯಲ್ಲಿರುವ ಅದಾನಿ ಸಂಸ್ಥೆಯು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಪದೋನ್ನತಿಗೊಳಿಸಿದೆ.

ಆಳ್ವ ಅವರು ಜಂಟಿ ಅಧ್ಯಕ್ಷರಾಗಿ ಅದಾನಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಯ ವಿವಿಧ ಕ್ಷೇತ್ರಗಳ ಯೋಜನೆಗಳ ರುವಾರಿಯಾಗಿದ್ದರು.ಈಗ ಮಹತ್ವದ ಹುದ್ದೆಯಾದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ.

ಕಿಶೋರ್ ಆಳ್ವ ಅವರು ಸುಮಾರು 700 ಸಂಸ್ಥೆಗಳ ಸದಸ್ಯರಿರುವ ಪ್ರತಿಷ್ಟಿತ ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (ವಾಣಿಜ್ಯ ಮತ್ತುಕೈಗಾರಿಕೆ)ನ ಅಧ್ಯಕ್ಷರಾಗಿ ಗೌರವ ಸೇವೆಯನ್ನು ಸಲ್ಲಿಸುತ್ತಿದ್ದು,ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಅದಾನಿ ಸಮೂಹದ ಅಧ್ಯಕ್ಷೀಯ ಸ್ಥಾನಕ್ಕೆ ಪದೋನ್ನತಿ ಪಡೆದ ಆಳ್ವ ಅವರು ದಕ್ಷಿಣ ಭಾರತದಲ್ಲಿ ಅದಾನಿ ಸಮೂಹದ ಹಲವಾರು ಯೋಜನೆಗಳ ನಿರ್ವಹಣೆಯ ಕೆಲಸಗಳ ರುವಾರಿಯಾಗಿರುತ್ತಾರೆ.

ಸುಮಾರು 24 ವರ್ಷಗಳ ಸುದೀರ್ಘ ಅನುಭವಿಯಾದ ಆಳ್ವ ಅವರು ಹಲವಾರು ಪ್ರತಿಷ್ಟಿತ ದೇಶ ವಿದೇಶಗಳ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.ಸಂಸ್ಥೆಯಲ್ಲಿ ಪ್ರದರ್ಶಿಸಿದ ಕಾರ್ಯಬದ್ಧತೆ, ಕ್ರಿಯಾಶೀಲತೆ ಮತ್ತು ನಾಯಕತ್ವ ಗುಣಗಳನ್ನು ಪ್ರಶಂಶಿಸಿ ಆಳ್ವ ಅವರನ್ನು ಜನರಲ್ ಮ್ಯಾನೇಜರ್‍ನಿಂದ ಉಪಾಧ್ಯಕ್ಷರ ಹುದ್ದೆಗೆ,ನಂತರ ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ತದನಂತರ ಜಂಟಿ ಅಧ್ಯಕ್ಷರ ಸ್ಥಾನಕ್ಕೆ ನೇಮಿತ್ತು.

ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಧರರಾದ ಕಿಶೋರ್ ಆಳ್ವ ಪ್ರತಿಷ್ಟಿತ ಸಂತ ಅಲೋಶಿಯಸ್ ಕಾಲೇಜು ಹಾಗೂ ನ್ಯಾಷನಲ್ ಪಬ್ಲಿಕ್ ಶಾಲೆ, ಬೆಂಗಳೂರು, ಇದರ ಪ್ರಾಕ್ತನ ವಿದ್ಯಾರ್ಥಿ.

ಆಳ್ವ ಅವರು ವಿದ್ಯಾರ್ಥಿಜೀವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ರಾಜೀವ್‍ಗಾಂ ಆರೋಗ್ಯ ವಿಶ್ವ ವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಒಳಗೊಂಡ ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.ಮಂಗಳೂರು ವಿಶ್ವವಿದ್ಯಾನಿಲಯದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಕೌನ್ಸಿಲ್‍ನ ಅಧ್ಯಕ್ಷರಾಗಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಎಳೆಯ ವಯಸ್ಸಿನಲ್ಲಿ ಪ್ರದರ್ಶಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಟರ್‍ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ ಇದರ ಸದಸ್ಯರಾಗಿ ಹಾಗೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೋರ್ಡ್ ಆಫ್ ಸ್ಟಡೀಸ್ ಇನ್ ಇಂಗ್ಲಿಷ್ ಇದರ ಸದಸ್ಯರಾಗಿ ಶಿಕ್ಷಣ ಕ್ಷೇತ್ರದಲ್ಲೂ ತಮ್ಮ ಗೌರವ ಸೇವೆಯನ್ನು ಸಲ್ಲಿಸುತ್ತಿದ್ದಾರೆ.