ಅದಮಾರು ಮೂಲ ಮಠದಿಂದ ಪುರಪ್ರವೇಶಕ್ಕೆ ಹೊರಟ ಭಾವೀ ಪರ್ಯಾಯ ಶ್ರೀಪಾದರಿಗೆ ಬೀಳ್ಕೊಡುಗೆ

ಪಡುಬಿದ್ರಿ:: ಮುಂಬರುವ ಎರಡು ವರ್ಷಗಳ ಅವಧಿಗೆ ಉಡುಪಿ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಉಡುಪಿ ಶ್ರೀ ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಅದಮಾರು ಮೂಲ ಮಠದಲ್ಲಿ ಬುಧವಾರ ಮಧ್ಯಾಹ್ನ ಸಂಭ್ರಮದಿಂದ ಬೀಳ್ಕೊಡಲಾಯಿತು.

ತಮ್ಮ ಆಶ್ರಮ ಗುರುಗಳಾದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಜತೆಗೆ ಅದಮಾರು ಮೂಲ ಮಠದಿಂದ ಉಡುಪಿಯಲ್ಲಿನ ಪುರಪ್ರವೇಶ ಸಂಭ್ರಮಕ್ಕೆ ಹೊರಟ ಶ್ರೀಪಾದರನ್ನು ಅದಮಾರು ಗ್ರಾಮಸ್ಥರು, ಮಠದ ಭಕ್ತರು ಹಿಂಬಾಲಿಸಿದರು.

ಶ್ರೀ ನರಸಿಂಹ ತೀರ್ಥ ಮೂಲ ಸಂಸ್ಥಾನ ಶ್ರೀ ಅದಮಾರು ಮಠದಲ್ಲಿನ ಶ್ರೀ ವಾಸುದೇವ ಸನ್ನಿಧಿಯಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಮ್ಮ ಪಟ್ಟದ ದೇವರಾದ ಶ್ರೀ ಕಾಳೀಯಮರ್ದನ ಶ್ರೀ ಕೃಷ್ಣ ದೇವರಿಗೆ ಪೂಜಾದಿಗಳನ್ನು ನೆರವೇರಿಸಿದರು. ಬಳಿಕ ತಮ್ಮ ಪಟ್ಟ ಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಚೊಚ್ಚಲ ಪರ್ಯಾಯವು ಸಾಂಗವಾಗಿ ಪೂರ್ಣಗೊಳ್ಳುವಂತೆ ಶ್ರೀ ಕೃಷ್ಣ, ಶ್ರೀ ಪೂರ್ಣಪ್ರಜ್ಞ, ಶ್ರೀ ವಾಯು, ಶ್ರೀ ಭೀಮಸೇನ ದೇವರ ನೆನೆದು ಪ್ರಾರ್ಥನೆಗಳನ್ನು ಸಲ್ಲಿಸಿದರು.

ಅದಮಾರು ಆದರ್ಶ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಎರ್ಮಾಳು, ಆದರ್ಶ ಮಹಿಳಾ ಮಂಡಲದ ಅಧ್ಯಕ್ಷೆ ಪಾರ್ವತಿ ಹಾಗೂ ಶ್ರೀ ಮಠದ ಭಕ್ತರೂ, ಶ್ರೀ ಕೃಷ್ಣ ಸೇವಾ ಬಳಗದ ವಾಸುದೇವ ಮಂಜಿತ್ತಾಯ ಮೆರವಣಿಗೆಯ ವಿವರಗಳನ್ನು ಶ್ರೀ ಪಾದರಲ್ಲಿ ಅರುಹಿದರು.

ಅದಮಾರು ಮಠದಿಂದ ಅದಮಾರು ಪೂರ್ಣಪ್ರಜ್ಞ ಪ.ಪೂ. ಕಾಲೇಜು ಬಳಿಯ ಸರ್ಕಲ್‍ವರೆಗೆ ಉಭಯ ಶ್ರೀಪಾದರೂ ಮೆರವಣಿಗೆಯಲ್ಲಿ ನಡೆದೇ ಸಾಗಿ ಬಂದರು. ಮಹಿಳಾ ಬಳಗದ ಚೆಂಡೆವಾದನದ ಸಹಿತ ಸಾಗಿ ಬಂದ ಮೆರವಣಗೆಯೊಂದಿಗೆ ಶ್ರೀಪಾದರು ವಾಹನಗಳಲ್ಲಿ ಮೊದಲಿಗೆ ಕುಂಜಾರು ಶ್ರೀ ದುರ್ಗಾ ಕ್ಷೇತ್ರಕ್ಕೆ ತೆರಳಿ ಶ್ರೀ ದುರ್ಗೆಯ ದರ್ಶನ ಗೈದು ಬಳಿಕ ಉಡುಪಿಯತ್ತ ಪ್ರಯಾಣಿಸಿದರು.

ಶ್ರೀ ಮಠದ ಶಿಷ್ಯವೃಂದ, ಆದರ್ಶ ಯುವಕ ಹಾಗೂ ಮಹಿಳಾ ಮಂಡಲದ ಸದಸ್ಯೆಯರು ಉಡುಪಿಯತ್ತ ಸಾಗಿದ ಮೆರವಣಿಗೆಯಲ್ಲೂ ಸಾಗಿ ಬಂದರು.
ಫೋಟೋ:08ಎಚ್‍ಕೆ2,2ಎ