ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಸಂಕಲ್ಪ-ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು

ಪಡುಬಿದ್ರಿ: ಅದಮಾರು ಗ್ರಾಮೀಣ ಪ್ರದೇಶದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿದ್ಯಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕರ ಒತ್ತಾಸೆಯಂತೆ ಶೀಘ್ರವೇ ಡಿಗ್ರಿ ಕಾಲೇಜು ಆರಂಭಿಸಲು ಸಂಕಲ್ಪಿಸಿರುವುದಾಗಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರೂ ಅದಮಾರು ಮಠಾಧೀಶರೂ ಆದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಗುರುವಾರ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರದ ಆಂಗ್ಲ ಮಾಧ್ಯಮ ನರ್ಸರಿ ಶಾಲಾ ನೂತನ ಕಟ್ಟಡ “ಕಿಶೋರ ಪ್ರಿಯಃ”ವನ್ನು ಉದ್ಘಾಟಿಸಿದ ಬಳಿಕ ಶಿಕ್ಷಣ ಸಂಸ್ಥೆಯ ಶ್ರೀ ವಾಸುದೇವ ಅಡಿಟೋರಿಯಮ್‍ನಲ್ಲಿ ನಡೆಸ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಆಶೀರ್ವಚಿಸಿದರು.

ವಿದ್ಯಾರ್ಥಿಗಳು ಜೀವನವನ್ನು ಅನರ್ಥಗೊಳಿಸಬಾರದು. ಜೀವನಕ್ಕೆ ಅರ್ಥವನ್ನು ನೀಡಿ. ವಿಶ್ವದ ಅತೀದೊಡ್ಡ ವಿಜ್ಞಾನಿಗಳಾಗಿ, ಮೇಧಾವಿಗಳಾಗಿ ಮೂಡಿಬನ್ನಿ ಎಂದು ಶ್ರೀಗಳು ಆಶೀರ್ವದಿಸಿದರು.

ಕರ್ನಾಟಕ ರಾಜ್ಯ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಸಮಾರಂಭದ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಗತ್ತಿಗೆ ಉಪಯೋಗಿಯಾಗುವಂತೆ ಬದುಕಿ. ಅದೇ ಶಿಕ್ಷಣ ಸಂಸ್ಥೆಗೆ ನೀಡುವ ಅತ್ಯುತ್ತಮ ಕೊಡುಗೆ. ಎಲ್ಲಿ ತ್ಯಾಗವಿರುತ್ತದೋ ಅಲ್ಲಿ ಎಲ್ಲವೂ ಸಿದ್ಧಿಸುತ್ತದೆ ಎನ್ನುವುದಕ್ಕೆ ಅದಮಾರು ಶಿಕ್ಷಣ ಸಂಸ್ಥೆಯೇ ಸಾಕ್ಷಿ ಎಂದರು.
ಪ್ರಾಚೀನ ಸಂಸ್ಕøತಿ ಮತ್ತು ಹೊಸ ತಂತ್ರಜ್ಞಾನಗಳನ್ನು ಸಮಾನವಾಗಿ ಜೋಡಿಸಿಕೊಂಡು ಹೋಗಿದ್ದರಿಂದಲೇ ಇಂದು ಭಾರತವು ಪ್ರಪಂಚದ ಅದ್ವಿತೀಯ ರಾಷ್ಟ್ರವಾಗಿ ಮೂಡಿಬರುತ್ತಿದೆ ಎಂದು ಸೂಲಿಬೆಲೆ ಅಭಿಪ್ರಾಯಿಸಿದರು.
1.20 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಉದ್ಘಾಟನೆಯೊಂದಿಗೆ “ವಿಶ್ವ ಕುಟೀರ” ಮೀಟಿಂಗ್ ಹಾಲ್‍ನ್ನೂ ಶ್ರೀಗಳು ಉದ್ಘಾಟಿಸಿದರು.

ಪುಸ್ತಕ ಬಿಡುಗಡೆ: ಸಭಾ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಎಮ್.ರಾಮಕೃಷ್ಣ ಪೈ ರಚಿಸಿದ “ಮೈಕ್ರೋ ಇಕನಾಮಿಕ್ಸ್” ಪಠ್ಯಪುಸ್ತಕವನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.
ಸನ್ಮಾನ: ಕಾಲೇಜಿಗೆ ಟೆಲಿಸ್ಕೋಪ್ ದಾನವಾಗಿ ನೀಡಿದ ಆದರ್ಶ ಅನಂತ ಆಚಾರ್ ಮತ್ತವರ ತಾಯಿ ಗಾಯತ್ರಿ, ಇಂಗ್ಲಿಷ್ ಎಮ್‍ಎ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ವಿಜೇತೆ ಅಂಕಿತಾ, ಕಟ್ಟಡ ನಿರ್ಮಾಣಗೈದ ಮಹನೀಯರನ್ನು, ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಪೈಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಪೂರ್ಣಪ್ರಜ್ಞ ಶಿಕಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆಚಾರ್ಯ, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಉಡುಪ, ಒಲಿವಿಯಾ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು.

ಪ್ರದೀಪ್ ಕುಮಾರ್ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಪೈ ಪ್ರಸ್ತಾವಿಸಿದರು. ಲಕ್ಷ್ಮೀ ಉಡುಪ ವಂದಿಸಿದರು.