ಅಕ್ಟೋಬರ್ 19ಕ್ಕೆ ಬಪ್ಪನಾಡು ಶ್ರೀ ದೇವಿಯ ಸ್ವರ್ಣ ಪಲ್ಲಕ್ಕಿಗೆ ಮುಹೂರ್ತ

ಮೂಲ್ಕಿ: ಈ ಬಾರಿ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆದ ಶ್ರೀಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಸ್ವರ್ಣ ಪಲ್ಲಕ್ಕಿ ಅರ್ಪಿಸುವ ಕಾರ್ಯಕ್ಕೆ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಮುಂದಾಗಿದ್ದು,ಅಕ್ಟೋಬರ್ 19 ವಿಜಯದಶಮಿ ಶುಭದಿನದಂದು ಪಲ್ಲಕ್ಕಿ ಮುಹೂರ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಸಂಜೆ ಶ್ರೀ ದೇವಳದ ಜ್ಞಾನಮಂದಿರದಲ್ಲಿ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯು ಕರೆದ ಸೀಮೆ ಭಕ್ತರ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಸುನಿಲ್ ಆಳ್ವ ಈ ಬಗ್ಗೆ ಮಾಹಿತಿ ನೀಡಿದರು.

ವಿಜಯದಶಮಿಯಂದು ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಸೀಮೆ ವ್ಯಾಪ್ತಿಯ 9 ಸುಮಂಗಲಿಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,ಬಳಿಕ ಪ ಮಾಗಣೆ ಭಕ್ತರ ವತಿಯಿಂದ ಚಂಡಿಕಾ ಹೋಮ,ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಳ್ವ ತಿಳಿಸಿದ್ದಾರೆ.

ಸುಮಾರು 15 ಕೆಜಿ ಚಿನ್ನ ಮತ್ತು 15 ಕೆಜಿ ಬೆಳ್ಳಿ ಉಪಯೋಗಿಸಿ ಸ್ವರ್ಣ ಪಲ್ಲಕ್ಕಿ ರಚಿಸಲಾಗುತ್ತಿದ್ದು,ಅಂದಾಜು ರೂ.5 ಕೋಟಿ ವೆಚ್ಚವಾಗಲಿದೆ ಎಂದವರು ತಿಳಿಸಿದ್ದು,ಈ ಬಾರಿಯ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಕಾರ್ಯ ನಡೆಸಿದ ಬಳಿಕ ಉಳಿಕೆ ಹಣ ರೂ.1.30 ಕೋಟಿಯನ್ನೂ ಇದಕ್ಕೆ ಬಳಸಲಾಗುವುದು ಎಂದು ಹೇಳಿದರು.

ಸ್ವರ್ಣ ಪಲ್ಲಕ್ಕಿ ಸಮಿತಿಯ ಸಂಚಾಲಕರಲ್ಲಿ ಒಬ್ಬರಾದ ಅತುಲ್ ಕುಡ್ವ ಮಾತನಾಡಿ,ಲೋಕ ಕಲ್ಯಾಣಾರ್ಥವಾಗಿ ಶ್ರೀದೇವಿಗೆ ಸ್ವರ್ಣ ಪಲ್ಲಕ್ಕಿ ಅರ್ಪಣೆ ನಡೆಸಲಾಗುತ್ತಿದ್ದು,ಸೀಮೆಯ ಎಲ್ಲಾ ಭಕ್ತರು ಸ್ವಯಂಪ್ರೇರಣೆಯಿಂದ ಸಹಕರಿಸಬೇಕೆಂದು ವಿನಂತಿಸಿದ್ದಾರೆ.

ಸ್ವರ್ಣ ಪಲ್ಲಕ್ಕಿಗೆ ಚಿನ್ನ ನೀಡುವ ಭಕ್ತರ ಉಪಯೋಗಕ್ಕಾಗಿ ಶ್ರೀ ದೇವಳದಲ್ಲಿ ಸ್ವರ್ಣ ಕೌಂಟರ್ ಆರಂಭಿಸಲಾಗುವುದು.ಚಿನ್ನ ನೀಡುವ ಭಕ್ತರು ಇಲ್ಲಿಂದಲೇ ಅದೇ ದಿನದ ದರದಲ್ಲಿ ಚಿನ್ನ ಖರೀದಿಸಲು ಅವಕಾಶವಿದೆ ಎಂದು ಮಾಹಿತಿ ನೀಡಲಾಯಿತು.
ಕಳೆದ ಬ್ರಹ್ಮಕಲಶ ಸಂದರ್ಭ ರಚಿಸಲಾದ ಎಲ್ಲಾ 32 ಗ್ರಾಮ ಸಮಿತಿಗಳು ಊರ್ಜಿತದಲ್ಲಿದ್ದು,ಅದೇ ಸಮಿತಿಯ ಮೂಲಕ ಗ್ರಾಮಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಿ ಸೀಮೆಯ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕರುಣಾಕರ ಶೆಟ್ಟಿ,ಸಂತೋಷ್ ಕುಮಾರ್ ಹೆಗ್ಡೆ,ಅತುಲ್ ಕುಡ್ವ,ಸೂರ್ಯಕುಮಾರ್ ಮತ್ತು ಚೆನ್ನಪ್ಪ ಬಿ.ಎಸ್.ಮೂಲ್ಕಿಯವರನ್ನು ಸ್ವರ್ಣ ಪಲ್ಲಕ್ಕಿ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆಮಾಡಲಾಗಿದೆ ಎಂದು ಸುನಿಲ್ ಆಳ್ವ ತಿಳಿಸಿದರು.
ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ,ಶ್ರೀದೇವಿಗೆ ಸಂತೃಪ್ತಿಯಾಗುವಂತೆ ಭಕ್ತರು ಸ್ವರ್ಣ ಪಲ್ಲಕ್ಕಿ ಅರ್ಪಿಸಲು ನಿರ್ಧರಿಸಿದ್ದಾರೆ.ಸೀಮೆ ಭಕ್ತರು ಏಕ ಮನಸ್ಸಿನಿಂದ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಶ್ರೀ ದೇವಿಗೆ ಭಕ್ತರು ಈ ಹಿಂದೆ ನೀಡಿದ ಚಿನ್ನಗಳ ಪೈಕಿ ನಿತ್ಯ ಉಪಯೋಗಿಸದ ಚಿನ್ನ ಸಾಕಷ್ಟಿದ್ದು,ಅವುಗಳನ್ನು ಸರಕಾರದ ಕಾನೂನಿಗೊಳಪಟ್ಟು ಸ್ವರ್ಣ ಪಲ್ಲಕ್ಕಿಗೆ ಉಪಯೋಗಿಸಲು ನಿರ್ಧರಿಸಲಾಗಿದ್ದು,ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದವರು ಹೇಳಿದರು.

ಸಭೆಗೆ ಮುನ್ನ ಶ್ರೀ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಅರ್ಚಕ ಶ್ರೀಪತಿ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಎನ್.ಎಸ್.ಮನೋಹರ ಶೆಟ್ಟಿ ಸ್ವರ್ಣ ಪಲ್ಲಕ್ಕಿಯ ವಿಜ್ಞಾಪನಾ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮುಂದಿನ ವರ್ಷದ ನವರಾತ್ರಿ ಸಂದರ್ಭ ಶ್ರೀ ದೇವಿಗೆ ಸ್ವರ್ಣ ಪಲ್ಲಕ್ಕಿ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಯಿತು.
ಅಭಿವೃದ್ಧಿ ಮತ್ತು ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ ಬಾಳದಗುತ್ತು ಮತ್ತು ಹರೀಶ್ಚಂದ್ರ ವಿ.ಕೋಟ್ಯಾನ್,ಅರ್ಚಕ ಶ್ರೀಪತಿ ಉಪಾಧ್ಯಾಯ ವೇದಿಕೆಯಲ್ಲಿದ್ದರು.

ಕಾರ್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಮಿತಿ ಸದಸ್ಯ ಸಂತೋಷ್‍ಕುಮಾರ್ ಹೆಗ್ಡೆ ವಂದಿಸಿದರು.