Work on construction of a new toll gate in Hejmady stopped

Padubidri, May 29th, 2018:  Work on eviction of petty shops near Hejmady toll plaza and construction of a new and seperate  toll gate was temporarily stopped due to protests by Hejmady Nagarika Samiti.  Kaup MLA Lalai R. Mendon arrived at the spot and said the problem will be resolved after holding a meeting with Udupi DC and senior police officials.    Full news in Kannada …..

ಹೆಜಮಾಡಿ ಟೋಲ್ ಪ್ಲಾಝಾ ಬಳಿ ಗೂಡಂಗಡಿಗಳ ತೆರವಿಗೆ ಮತ್ತು ಪ್ರತ್ಯೇಕ ಟೋಲ್ ನಿರ್ಮಾಣ ಕಾಮಗಾರಿಗೆ ತಡೆ

ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳ ಬಳಿ ಸಮಾಲೋಚನೆ-ಲಾಲಾಜಿ ಆರ್. ಮೆಂಡನ್

ಹೆಜಮಾಡಿ ಟೋಲ್ ಪ್ಲಾಝಾ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಾಚರಿಸುತ್ತಿದ್ದ 20ಕ್ಕೂ ಅಧಿಕ ಗೂಡಂಗಡಿಗಳನ್ನು ತೆರವುಗೊಳಿಸಲು ನವಯುಗ ಟೋಲ್ ಕಂಪನಿಯು ಸೋಮವಾರ ಮಂದಡಿಯಿಟ್ಟಿದ್ದು,ಹೆಜಮಾಡಿ ನಾಗರಿಕ ಸಮಿತಿ ಪ್ರತಿಭಟನೆಯಿಂದ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.ಇದೇ ವೇಳೆ ಗ್ರಾಪಂ ಬೇಡಿಕೆಯನ್ನು ಈಡೇರಿಸದೆ ಹೆಜಮಾಡಿ ಒಳ ರಸ್ತೆಗೆ ಪ್ರತ್ಯೇಕ ಟೋಲ್ ನಿರ್ಮಾಣ ಕಾಮಗಾರಿಗೂ ಬ್ರೇಕ್ ಹಾಕಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಲಾಲಾಜಿ ಆರ್.ಮೆಂಡನ್ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳ ಜತೆ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಡಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಜಮಾಡಿ ನಾಗರಿಕ ಸಮಿತಿಯ ಅಧ್ಯಕ್ಷ ಗುಲಾಮ್ ಮೊಹಮ್ಮದ್,ಕಾರ್ಯದರ್ಶಿ ಶೇಖರ್ ಹೆಜ್ಮಾಡಿ ಮತ್ತು ಸದಸ್ಯರು ಹಾಗೂ ಹೆಜಮಾಡಿ ಗ್ರಾಪಂ ಮತ್ತು ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ಟೋಲ್ ಪ್ಲಾಝಾ ಬಳಿ ಬರುವುದಕ್ಕೆ ಮುನ್ನವೇ ಆಗಮಿಸಿದ ಜೆಸಿಬಿಯಿಂದ ಗೂಡಂಗಡಿಗಳನ್ನು ತೆರವುಗೊಳೊಸಲು ಸನ್ನದ್ಧರಾಗಿದ್ದರು.ಈ ಬಗ್ಗೆ ಸ್ಥಳೀಯ ಪೋಲೀಸರಿಗೂ ಪೂರ್ವ ಮಾಹಿತಿ ನೀಡಿರಲಿಲ್ಲ.
ಶನಿವಾರ ಗೂಡಂಗಡಿಗಳಿಗೆ ನೋಟೀಸ್ ನೀಡಲಾಗಿದ್ದು,ಸೋಮವಾರ ಬೆಳಿಗ್ಗೆಯೇ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು.ಎಲ್ಲಾ ಗೂಡಂಗಡಿಗಳನ್ನು ತೆರವುಗೊಳಿಸಿ ಅಲ್ಲಿ ಟೋಲ್ ವತಿಯಿಂದ ಎರಡು ಮಿನಿ ಕೆಫೆ ನಿರ್ಮಿಸುವುದು ಅವರ ಉದ್ದೇಶವಾಗಿತ್ತು.

ಬಡ ಜನರು ಹೊಟ್ಟೆಪಾಡಿಗಾಗಿ ಗೂಡಂಗಡಿ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದು,ತೆರವುಗೊಳಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶೇಖರ್ ಹೆಜ್ಮಾಡಿ ಎಚ್ಚರಿಸಿದರು.ಗೂಡಂಗಡಿ ತೆರವಿಗೆ ಮುನ್ನ ಹೆದ್ದಾರಿ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವ ಹೋಟೆಲ್ ಮತ್ತು ದಾಬಾಗಳನ್ನು ಮೊದಲು ತೆರವುಗೊಳಿಸಿ.ತಪ್ಪಿದಲ್ಲಿ ರಸ್ತೆ ತಡೆ ಸಹಿತ ಪ್ರತಿಭಟನೆ ಮಾಡುವುದಾಗಿ ಗುಲಾಂ ಮೊಹಮ್ಮದ್ ಎಚ್ಚರಿಸಿದರು.

ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ಸಾಧ್ಯವಿಲ್ಲ.ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಠಾಣಾಧಿಕಾರಿ ಸತೀಶ್ ಎಚ್ಚರಿಸಿದ್ದು,ಪ್ರತಿಭಟನಾಕಾರರನ್ನು ಕೆರಳಿಸಿತ್ತು.ಯಾವುದೇ ಕಾರಣಕ್ಕೂ ತೆರವು ಕಾಯಾಚರಣೆ ನಡೆಸಲಾಗದು.ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಶಾಸಕ ಲಾಲಾಜಿ ಆರ್.ಮೆಂಡನ್,ಠಾಣಾಧಿಕಾರಿಯವರಿಗೆ ಜನಸಾಮಾನ್ಯರ ರಕ್ಷಣೆಗೆ ಪೋಲೀಸರು ಮುಂದಾಗಬೇಕೆಂದು ಹೇಳಿದರು.ಅಲ್ಲದೆ ಗ್ರಾಪಂ ವತಿಯಿಂದ ಟೋಲ್ ಪ್ಲಾಝಾಗೆ ನೋಟೀಸ್ ನೀಡುವಂತೆಯೂ ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು.ಅಲ್ಲಿ ತನಕ ತೆರವು ಕಾರ್ಯಾಚರಣೆ ಮತ್ತು ಟೋಲ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಿಳಿಸಿದರು.

ಈ ಹಿಂದೆ ಟೋಲ್ ನಿರ್ಮಾಣ ಸಂದರ್ಭ ಜಿಲ್ಲಾಧಿಕಾರಿ ಸೂಚನೆಯಂತೆ ನವಯುಗ್ ಪ್ರಾಜೆಕ್ಟ್ ಹೆಡ್ ವಿಜಯ ಸ್ಯಾಮ್ಸನ್ ಮತ್ತು ಅಧಿಕಾರಿ ಶಂಕರ್ ಸಮ್ಮುಖ ನಡೆದ ಸಭೆಯಲ್ಲಿ ಹೆಜಮಾಡಿ ಗ್ರಾಮದ ಹಲವು ಬೇಡಿಕೆಗಳನ್ನು ಆರು ತಿಂಗಳ ಒಳಗೆ ಈಡೇರಿಸುವುದಗಿ ಭರವಸೆ ನೀಡಿದ್ದರು.

ಹೆದ್ದಾರಿ ಅಗಲೀಕರಣ ಸಂದರ್ಭ ತೆರವುಗೊಳಿಸಿದ 3 ಬಸ್ಸು ತಂಗುದಾಣಗಳ ಮರು ನಿರ್ಮಾಣ,ಶಿವನಗರ ಬಳಿ ಸ್ಕೈವಾಕ್ ನಿರ್ಮಾಣ,ಟೋಲ್‍ಗಾಗಿ ನಿರ್ಮಿಸಿದ ಕೊಳವೆ ಬಾವಿಯಿಂದ ಹೆಜಮಾಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ,ಟೋಲ್ ನಿರ್ವಸಿತರಿಗೆ ಪುನರ್ವಸತಿ,ಗ್ರಾಮವ್ಯಾಪ್ತಿಯ ಹೆದ್ದಾರಿಯುದ್ದಕ್ಕೂ ಚರಂಡಿ ಮತ್ತು ದಾರಿದೀಪ ಅಳವಡಿಕೆ ಹಾಗೂ ಎರಡು ರಸ್ತೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು.ಈ ಬಗ್ಗೆ ಗ್ರಾಪಂ ನಿರ್ಣಯವನ್ನೂ ಕೈಗೊಂಡಿತ್ತು.ಅಲ್ಲದೆ ತಮ್ಮ ಸಿಎಸ್‍ಆರ್ ನಿಧಿಯಿಂದ ಶೇ.2 ನಿಧಿಯನ್ನು ಗ್ರಾಮಾಭಿವೃದ್ಧಿಗೆ ನೀಡವುದಾಗಿಯೂ ಹೇಳತ್ತು.

ಆದರೆ ಈವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ.ಸಿಎಸ್‍ಆರ್ ನಿಧಿಯನ್ನೂ ನೀಡಿಲ್ಲ.ಬದಲಾಗಿ ಹೆಜಮಾಡಿ ಒಳ ರಸ್ತೆಗೆ ಪ್ರತ್ಯೇಕ ಟೋಲ್ ನಿರ್ಮಾಣಕ್ಕೆ ಮುಂದಾಗಿದ್ದಲ್ಲದೆ,ಗೂಡಂಗಡಿಗಳ ತೆರವಿಗೆ ಮುಂದಡಿಯಿಟ್ಟಿದ್ದರು.
ಈ ಸಂದರ್ಭ ಆಗಮಿಸಿದ ಟೋಲ್ ಮ್ಯಾನೇಜರ್ ರವಿಬಾಬು ಹೆದ್ದಾರಿ ಬದಿ ಮತ್ತು ಟೋಲ್ ಸುತ್ತಮುತ್ತ ಗೂಡಂಗಡಿಗಳನ್ನು ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿಲ್ಲ.ಹಾಗಾಗಿ ಇಲಾಖಾ ಅನುಮತಿ ಪಡೆದೇ ತರವು ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ.ಹೆಜಮಾಡಿ ಒಳ ರಸ್ತೆಯಿಂದ ಟೋಲ್ ಲೀಕ್ ಆಗುತ್ತಿರುವುದನ್ನು ಮನಗಂಡು ಪ್ರತ್ಯೇಕ ಟೋಲ್ ನಿರ್ಮಾಣಕ್ಕೆ ಇಲಾಖಾ ಅನುಮತಿ ಪಡೆದೇ ನಿರ್ಧರಿಸಲಾಗಿದೆ ಎಂದರು.

ಪೋಲೀಸರು ಕಾರ್ಯಾವರಣೆ ಸ್ಥಗಿತಗೊಳಿಸುವಂತೆ ತಿಳಿಸಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ಶರಣ್ ಕುಮಾರ್ ಮಟ್ಟು,ಪಾಂಡುರಂಗ ಕರ್ಕೇರ,ಸಂದೇಶ್ ಶೆಟ್ಟಿ,ಸಚಿನ್ ನಾಯಕ್,ಪ್ರಾಣೇಶ್ ಹೆಜ್ಮಾಡಿ,ಗಣೇಶ್,ಹಮೀದ್,ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.