ಹೆಜಮಾಡಿಯಲ್ಲಿ ಗ್ರಾಮದ ಮಾರಿ ಓಡಿಸುವ ಜನಪದೀಯ ಕಂಗೀಲು ಸೇವೆ

ಪಡುಬಿದ್ರಿ: ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಗ್ರಾಮದ ಮಾರಿ ಓಡಿಸುವ ಜನಪದೀಯ ಸೇವೆ ಕಂಗೀಲು ಸೇವೆ ಹೆಜಮಾಡಿ ಗ್ರಾಮದಲ್ಲಿ ಮಂಗಳವಾರ ಸಂಪ್ರದಾಯ ಬದ್ಧವಾಗಿ ನಡೆಯಿತು.

ಊರಿಗೆ ಬಂದ ಮಾರಿಯನ್ನು ಓಡಿಸುವ ನಂಬಿಕೆಯೊಂದಿಗೆ ಹೆಜಮಾಡಿ ಗ್ರಾಮದ ಶ್ರೀ ಬ್ರಹ್ಮಮುಗ್ಗೆರ್ಕಳ ಆರಾಧಕರು ನಿಗದಿತ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಕಂಗೀಲು ಕುಣಿತ ಸಾಕ್ಷಿಯಾಗಿದೆ.

ಕರಾವಳಿ ಭಾಗದಲ್ಲಿ ತನ್ನದೇ ಆದ ಐತಿಹ್ಯ ಹೊಂದಿರುವ ಹಲವಾರು ಜನಪದ ಆಚರಣೆಗಳು ಸಂಪ್ರದಾಯ ಬದ್ದವಾಗಿ ಇಂದಿಗೂ ಮುನ್ನಡೆಯುತ್ತಿದೆ. ಮೊದಲಾಗಿ ಕಂಗೀಲು ಕುಣಿತವನ್ನು ತಲಾ ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಹೆಜಮಾಡಿಯಲ್ಲಿ ದೈವಾರ್ಷಿಕವಾಗಿ ಒಂದು ದಿನ ಮಾತ್ರ ಈ ಆಚರಣೆ ಮುಂದುವರಿದಿದೆ.

ಹೆಜಮಾಡಿಯ ಬಸ್ತಿಪಡ್ಪು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಉತ್ಸವದ ಮರುದಿನ(ಮಾಯಿ ಹುಣ್ಣಿಮೆಯ ಮರುದಿನ) ಹೆಜಮಾಡಿಯಲ್ಲಿ ದೈವಾರ್ಷಿಕವಾಗಿ ಈ ಕಂಗೀಲು ಆಚರಣೆ ನಡೆಯುತ್ತಿದೆ. ಹೆಜಮಾಡಿಯ ಶ್ರೀ ಬ್ರಹ್ಮಮುಗ್ಗೆರ್ಕಳ ಆದಿ ಸ್ಥಳಕ್ಕೆ ಸಂಬಂಧಿಸಿದ ಆರಾಧಕರು ಊರಿನ ಮಾರಿ ದೂರ ಮಾಡುವ ಕಂಗೀಲು ಕುಣಿತವನ್ನು ನಡೆಸಿಕೊಡುತ್ತಾ ಬಂದಿದ್ದಾರೆ.

ತೆಂಗಿನ ಸಿರಿಗಳನ್ನು ಹೆಜಮಾಡಿಯ ಧೂಮಾವತಿ ದೈವದ ಕಲದಲ್ಲಿಟ್ಟು ಪ್ರಾರ್ಥಿಸಿ ಮೆರವಣಿಗೆ ಮೂಲಕ ಪರಿಕರಗಳೊಂದಿಗೆ ಆಗಮಿಸಿ ಶ್ರೀ ಬ್ರಹ್ಮಸ್ಥಾನದ ಬಳಿಯಿರುವ ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನದ ಆದಿಯಲ್ಲಿರಿಸಿ ಸಮಾಜದ ಮುಖಂಡರು ಹಾಗೂ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಗ್ರಾಮದೇವರ ಸಹಿತ ಅಲ್ಲಿನ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಜನಪದೀಯವಾದ ಕಂಗೀಲು ಆಚರಣೆಗೆ ಚಾಲನೆ ನೀಡಲಾಯಿತು.

ಭೂಮಿಯಲ್ಲಿ ಅಧರ್ಮ ತಾಂಡವಾಡುತ್ತಿರುವ ಆ ಸಂದರ್ಭದಲ್ಲಿ ಶ್ರೀಕೃಷ್ಣ ದೇವರು ಕೊರಗಜ್ಜನ ರೂಪದಲ್ಲಿ ಗೋಪಿಕಾ ಸ್ತ್ರೀಯರನ್ನು ಸಿರಿಗಳಾಗಿ ಒಟ್ಟು ಸೇರಿಸಿಕೊಂಡು ಭೂಮಿಗೆ ಬಂದನೆಂದು ಐತಿಹ್ಯ ಹೊಂದಲಾಗಿದೆ. ಜನರಿಗೆ ಬಂದ ಕಷ್ಟ, ಕೋಟಲೆ, ದುರಿತ, ದುಮ್ಮಾನ, ರೋಗ ರುಜಿನಗಳನ್ನು ದೂರ ಮಾಡುವ ಸಂಪ್ರಾದಾಯ ಕಂಗೀಲು ಕುಣಿತದಲ್ಲಡಗಿದೆ.
ಇದಕ್ಕೆ ಸಂಬಂಧಿಸಿ ಪಾಡ್ದನ ಹಾಡಿನೊಂದಿಗೆ ಹೆಜಮಾಡಿಯಲ್ಲಿ ನಡೆದ ಕಂಗೀಲು ಕುಣಿತ ತಂಡದಲ್ಲಿ ಕೊರಗಜ್ಜ ಸೇರಿದಂತೆ ಏಳು ಕಲಾವಿದರ ತಂಡವಿತ್ತು.

ಕಂಗೀಲು ಕುಣಿತದ ಹಾದಿ: ಆದಿ ಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಕಂಗೀಲು ಸಿರಿ ಕಟ್ಟಿ ಹೆಜಮಾಡಿ ಬ್ರಹ್ಮಸ್ಥಾನವಾಗಿ, ಹೆಜಮಾಡಿ ಅಳಿವೆಕೋಡಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನ, ಪಲಿಮಾರು, ಚರಂತಿಪೇಟೆ, ಬಪ್ಪನಾಡು, ಮಾನಂಪಾಡಿಕೋಡಿ, ಪರಪಟ್ಟ, ಹೊಸಾಗ್ಮೆ, ಕಡವಿನಬಾಗಿಲು, ಗುಂಡಿಯಿಂದ ದೊಡ್ಡಮನೆ ತೋಟವಾಗಿ, ಮಟ್ಟುಪಟ್ಣ ಭಜನಾ ಮಂದಿರದ ಬಳಿಯಿಂದ ಉತ್ತರ ಸುಲ್ತಾನ್ ರಸ್ತೆಗಾಗಿ ಹೆಜಮಾಡಿ ಗಡುವಿನಲ್ಲಿ ಸಿರಿ ಬಿಡುವ ಮೂಲಕ ಊರಿನ ಮಾರಿಯನ್ನ ಓಡಿಸುವ ಪ್ರಕ್ರಿಯೆ ನಡೆಯಿತು.
ಕಂಗೀಲು ಕುಣಿತ ಊರು ಸಂಚರಿಸುವ ಸಮಯದಲ್ಲಿ ಜನ ಹರಕೆಯ ರೂಪದಲ್ಲಿ ಕೊರಗಜ್ಜನಿಗೆ ತೆಂಗಿನ ಕಾಯಿ, ಅಕ್ಕಿ, ಮಂಡಕ್ಕಿ, ಶೇಂದಿ ಹಾಗೂ ಹಣದ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಾರೆ. ಅತೀ ಹೆಚ್ಚು ದೈವ ದೇವರುಗಳ ನಾಡು ಹೆಜಮಾಡಿಯಲ್ಲಿ ಗ್ರಾಮಸ್ಥರು ಭಯ ಭಕ್ತಿಯಿಂದ ಕಂಗೀಲು ಕುಣಿತವನ್ನು ಸ್ವಾಗತಿಸುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕೊರಗಜ್ಜನಲ್ಲಿ ಭಿನ್ನವಿಸಿಕೊಂಡು ಪರಿಹಾರ ಪಡೆಯುತ್ತಾರೆ.

ಕಂಗೀಲು ಕುಣಿತದ ಸಂಪ್ರದಾಯ ಬದ್ದ ಆಚರಣೆಯ ಮಹತ್ವ ಉಳಿಯಬೇಕು. ನಂಬಿಕೆಗೆ ದಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ಮುಗ್ಗೆರ್ಕಳ ಸಮಾಜದ ಹಿರಿಯರು ಕಳಕಳಿಯಿಂದ ವಿನಂತಿಸುತ್ತಾರೆ.

ಅನಿಸಿಕೆ

ಮುಗ್ಗೆರ್ಕಳ ಸಮಾಜದಲ್ಲಿ ಜನರ ಕೊರತೆಯಿದ್ದರೂ ಸಂಪ್ರದಾಯ, ನಂಬಿಕೆಗೆ ದಕ್ಕೆ ಬಾರದಂತೆ ಮಾರಿಯನ್ನು ಒದ್ದೋಡಿಸುವ ಕಂಗೀಲು ಆಚರಣೆಯನ್ನು ಮುಂದುವರಿಸಲಾಗುತ್ತಿದೆ. ದೈವ ದೇವರುಗಳು ಆಶೀರ್ವದಿಸಿ ನಡೆಸಿಕೊಂಡು ಬರುವವರೆಗೆ ನಮ್ಮ ಸಮಾಜದ ಯುವಕರು ಕಂಗೀಲು ಸೇವೆ ನಡೆಸಿಕೊಂಡು ಬರುತ್ತಾರೆ ಎಂಬ ನಂಬಿಕೆಯಿದೆ.
-ನಿತಿನ್ ಕೋಡಿ, ಮುಖಂಡ.

ಮನೆ ಮನೆಗೆ ತೆರಳಿ ಸೇವೆ ಸಲ್ಲಿಸಿದಾಗ ಜನ ನೀಡುತ್ತಿದ್ದ ಕಾಣಿಕೆಯಿಂದ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಇದೀಗ ಸಮುದಾಯದಲ್ಲಿ ಜನರ ಕೊರತೆಯಿದ್ದರೂ ಅಳಿದುಳಿದ ಕೆಲವೇ ಜನರ ಮೂಲಕ ನಡೆಯುವ ಕಂಗೀಲು ಕುಣಿತ ಊರು ಸಂಚಾರ ಸಂದರ್ಭದಲ್ಲಿ ಕಷ್ಟ ಕಾರ್ಪಣ್ಯ ನಿವಾರಣೆಗಾಗಿ ಹರಕೆ ರೂಪದಲ್ಲಿ ಭಕ್ತರು ಕಾಣಿಕೆಯನ್ನು ನೀಡುತ್ತಾರೆ. ಹೆಜಮಾಡಿ ಭಾಗದ ಜನತೆ ತಮ್ಮ ದುರಿತ ದುಮ್ಮಾನಗಳ ಬಗ್ಗೆ ದೈವದಲ್ಲಿ ಬೇಡಿಕೊಂಡಾಗ ಇಷ್ಟಾರ್ಥ ಸಿದ್ಧಿಸಿದ ಹಲವಾರು ನಿದರ್ಶನಗಳಿವೆ.
-ಆನಂದ, ಕೊರಗಜ್ಜ ದೈವ ಪಾತ್ರದಾರಿ.