ಸರ್ವಿಸ್ ರಸ್ತೆ ಕಾಮಗಾರಿಗಾಗಿ ಮಹಾಲಿಂಗೇಶ್ವರ ಪ್ರವೇಶ ದ್ವಾರ ನೆಲಸಮ

ಪಡುಬಿದ್ರಿ: ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಪಡುಬಿದ್ರಿ ಸರ್ವಿಸ್ ರಸ್ತೆ ಕಾಮಗಾರಿಗೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಚಾಲನೆ ದೊರಕಿದ್ದು, ಕಾಮಗಾರಿಗೆ ಪೂರಕವಾಗಿ ಗುರುವಾರ ಸುಮಾರು 30ವರ್ಷ ಹಳೆಯದಾದ ಪಡುಬಿದ್ರಿಯ ದಿ.ಅಣ್ಣಾಜಿ ರಾಯರು ನಿರ್ಮಿಸಿಕೊಟ್ಟಿದ್ದ ಶ್ರೀ ಮಹಾಲಿಂಗೇಶ್ವರ ಪ್ರವೇಶ ದ್ವಾರವನ್ನು ಕೆಡವಲಾಯಿತು.

ಕಳೆದ ವಾರವಷ್ಟೇ ಪಶ್ಚಿಮ ಬದಿಯ ಮೆಟಲಿಂಗ್ ವರ್ಕ್ ಮುಗಿದಿತ್ತು. ಸುಮಾರು 2ವರ್ಷಗಳ ಹಿಂದೆ ಚತುಃಷ್ಪಥ ಕಾಮಗಾರಿ ಮುಗಿದ ತಕ್ಷಣ ಜೆಲ್ಲಿ ಹೊದೆಸಿದ್ದ ಹೆದ್ದಾರಿಯ ಪೂರ್ವ ಬದಿಯ ಸರ್ವಿಸ್ ರಸ್ತೆಗೆ ಇನ್ನೂ ಡಾಮರೀಕರಣಗೊಳ್ಳುವ ಭಾಗ್ಯ ಲಭಿಸಿಲ್ಲ. ಒಳಚರಂಡಿ ಕಾಮಗಾರಿಗಳೂ ಇನ್ನೂ ಅಸಮರ್ಪಕವಾಗಿವೆ.

ಈ ಕಾಮಗಾರಿಗಳ ಕುರಿತಾಗಿ ನವಯುಗ ನಿರ್ಮಾಣ ಕಂಪೆನಿ ಹಿಂದಿನಿಂದಲೂ ನಿರ್ಲಕ್ಷ್ಯವನ್ನೇ ಪ್ರದರ್ಶಿಸುತ್ತಾ ಬಂದಿದೆ. ಅಲ್ಲಲ್ಲಿ ಒಳಚರಂಡಿಯ ಕಾಂಕ್ರೀಟ್ ಹೊದಿಕೆಗಳು ಚರಂಡಿಯ ಒಳಗೂ ಬಿದ್ದಿದ್ದು ಜಿಲ್ಲಾಡಳಿತ ಸಕ್ಷಮ ಉಸ್ತುವಾರಿ ಇಲ್ಲದಿದ್ದಲ್ಲಿ ಅರೆಬರೆಯಾಗಿಯೇ ಮುಗಿಸಿ ಕಾಲ್ಕೀಳಬಹುದಾಗಿಯೂ ಜನತೆ ಆರೋಪಿಸುತ್ತಿವೆ.

ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಕಾಮಗಾರಿಗಳು ಪೂರ್ಣಗೊಂಡಾಗಲಷ್ಟೇ ಹೆದ್ದಾರಿಯಲ್ಲಿ ಈಗಾಗಲೇ ನೆಟ್ಟಿರುವ ವಿದ್ಯುತ್‍ದೀಪಗಳು ಉರಿಯಬಹುದಾಗಿದೆ. ಆ ಬಳಿಕ ಇನ್ನಷ್ಟು ಟೋಲ್ ದರ ಏರಿಕೆಯೊಂದಿಗೆ ಉಡುಪಿ ಜಿಲ್ಲೆಯ ಈ ಭಾಗವನ್ನು ಹಾದುಹೋಗುವ ವಾಹನಗಳ ಮಾಲಕರಿಗೆ ಮತ್ತಷ್ಟು ಬರೆ ಬೀಳಲಿದೆ.