ಕಠಿನತಮ ಪರಿಸ್ಥಿತಿಯಲ್ಲೂ ಸರಕಾರಕ್ಕೆ ಪೂರ್ಣ ಸಹಕಾರ: ಟ್ಯಾಕ್ಸಿಮೆನ್ ಎಸೋಸಿಯೇಶನ್

ಪಡುಬಿದ್ರಿ: ಕೊರೊನಾ ಮಹಾಮಾರಿಗೆ ಸಂಬಂಧಿಸಿದಂತೆ ಮುಂದೆಯೂ ಎದುರಾಗಬಹುದಾದ ಕಠಿನತಮ ಪರಿಸ್ಥಿತಿಯಲ್ಲೂ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಎಸೋಸಿಯೇಶನ್ ತನ್ನ ಪೂರ್ಣ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೀಡಲಿರುವುದಾಗಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಎಸೋಸಿಯೇಶನ್ ಗೌರವ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ತಿಳಿಸಿದ್ದಾರೆ.

ಅವರು ಪಡುಬಿದ್ರಿಯಲ್ಲಿ ಎ. 9ರಂದು ಸಂಸ್ಥೆಯ ಪಡುಬಿದ್ರಿ ಘಟಕದ ವತಿಯಿಂದ ಪಡುಬಿದ್ರಿಯ ಸುಮಾರು 50 ಮಂದಿ ಟ್ಯಾಕ್ಸಿ ಚಾಲಕರಿಗೆ ವಿತರಿಸಲಾದ ಸುಮಾರು 40,000ರೂ. ವೆಚ್ಚದ ಅಕ್ಕಿ, ಬೆಲ್ಲ ಸಕ್ಕರೆ ಸಹಿತದ ಆಹಾರ ವಸ್ತುಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪಡುಬಿದ್ರಿ ಟ್ಯಾಕ್ಸಿಮೆನ್ ಎಸೋಸಿಯೇಶನ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು ತಮ್ಮ ಸಂಘಟನೆಯ ಸದಸ್ಯರಿಗೆ ಕೋವಿಡ್-19ರ ಈ ಸಂಕೀರ್ಣ ಸ್ಥಿತಿಯಲ್ಲಿ ಸರಕಾರದ ಆದೇಶಗಳಿಗೆ ಅನುಗುಣವಾಗಿ ಮುಂದುವರಿವ ಕುರಿತಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ ಅವರು ಸಂಘದ ಸದಸ್ಯರಿಗೆ 10ಕೆಜಿ ಅಕ್ಕಿ, 2ಕೆಜಿ ಬೆಲ್ಲ, 2ಕೆಜಿ ಸಕ್ಕರೆ, ಅರ್ಧ ಕೆಜಿ ಚಹಾಹುಡಿಗಳ ಕಿಟ್ಟನ್ನು ವಿತರಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಕೌಸರ್, ಕೋಶಾಧಿಕಾರಿ ಸುರೇಶ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.