Shri Mahalingeshwara Mahaganapathi temple Padubidri

Here is an article in Kannada by Hareesh Kumar Hejamady regarding Padubidri’s famous Shri Mahalingeshwara Mahaganapathi temple.  Photos by: Ravi Digitals, Padubidri.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ,ಪಡುಬಿದ್ರಿ

                              ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ಪಡುಬಿದ್ರಿಯ ಆದಿಪೂಜಿತ ಇಷ್ಟಸಿದ್ಧಿ ಮಹಾಗಣಪತಿ

  • ಎಚ್ಕೆ ಹೆಜ್ಮಾಡಿ, ಪಡುಬಿದ್ರಿ

ಉಡುಪಿ ಜಿಲ್ಲೆಯ ನಡ್ಸಾಲು ಗ್ರಾಮದಲ್ಲಿ ಪ್ರತಿಷ್ಠಾಪಪಿಸಲ್ಪಟ್ಟ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯವು ತನ್ನದೇ ಆದ ಹಿರಿಮೆ ಗರಿಮೆಗಳಿಂದ ಸ್ಥಾನಿಕ ಮೌಲ್ಯಗಳಿಂದ ಊರ ಪರವೂರ ಭಕ್ತರ ಮನಸ್ಸಿನಂಗಳದಲ್ಲಿ ನೆಲೆಯೂರಿದೆ.
ಬಯಲು ಆಲಯ ಶ್ರೀ ಖಡ್ಗೇಶ್ವರೀ ಸಾನಿಧ್ಯವಿರುವ ಪಡುಬಿದ್ರಿಗೆ ಪೊಟ್ಟಪ್ಪ ಕಟ್ಟದಪ್ಪ ಪ್ರಸಿದ್ಧಿಯ ಇಷ್ಟ ಸಿದ್ಧಿ ಮಹಾಗಣಪತಿ,ಗ್ರಾಮದೊಡೆಯ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಅಬ್ಬರದಿಂದ ಅಭಯ ಕೊಡುವ ದೈವಗಳು ಕೀರ್ತಿಯನ್ನು ತಂದುಕೊಟ್ಟಿವೆ.

ಭಾದ್ರಪದ ಶುದ್ಧ ಚೌತಿ: ನಾಡಿನೆಲ್ಲೆಡೆ ಶೃದ್ಧಾ ಭಕ್ತಿಯಿಂದ ಆಚರಿಸುವ ಚೌತಿ ಹಬ್ಬ ಇಲ್ಲಿನ ಗ್ರಾಮ ದೇವಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲೂ ಸಂಭ್ರಮ ಸಡಗರದಿಂದ ಆಚರಿಸಲ್ಪಡುತ್ತದೆ.ಈ ದಿನ 108 ತೆಂಗಿನ ಕಾಯಿ ಗಣ ಹೋಮ ನಡೆಯುತ್ತದೆ.ಈ ಗಣಹೋಮಕ್ಕೆ ತೆಂಗಿನಕಾಯಿ,ಅರಳು ಕಬ್ಬು,ತುಪ್ಪ,ಬಾಳೆಹಣ್ಣು,ಜೇನುತುಪ್ಪ ಸಹಿತ ಅಷ್ಟದ್ರವ್ಯ ತಯಾರಿಸಿ ಹೋಮ ನಡೆಸಿ ಪ್ರಸಾದ ವಿತರಿಸಲಾಗುತ್ತದೆ.ಅದಲ್ಲದೆ ವಿಶೇಷ ಅಪ್ಪ ಸೇವೆ,ಪೊಟ್ಟಪ್ಪ ಸೇವೆ,ಪಂಚಕಜ್ಜಾಯ ಸೇವೆ ಚೌತಿಯಂದು ನಡೆಯುತ್ತದೆ.

 

ಶ್ರೀ ದೇವಳದಲ್ಲಿ ಮೂಲಸ್ಥಾನ ಸಾನಿಧ್ಯವಿರುವ ಶ್ರೀ ಮಹಾಲಿಂಗೇಶ್ವರ ದೇವರ ದಕ್ಷಿಣ ದಿಕ್ಕನಲ್ಲಿ ಪ್ರತ್ಯೇಕ ಗರ್ಭಗುಡಿಯನ್ನು ಹೊಂದಿರುವ ಶ್ರೀ ಮಹಾಗಣಪತಿ ಸಂಕಲ್ಪವು ಉಪಸ್ಥಾನವಾದರೂ ವಿಶಿಷ್ಟ ವಿಧಾನದಿಂದ ನೆಲೆಯಾಗಿದೆ.ಈ ವಿಭಿನ್ನ ಪರಿಕಲ್ಪನೆಯೇ ಶ್ರೀ ಮಹಾಗಣಪತಿಯ ವಿಶೇಷ.ಹಾಗಾಗಿಯೇ ಪಡುಬಿದ್ರಿ ಮಹಾಗಣಪತಿ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ.

ಶ್ರೀ ಗಣೇಶ ಚೌತಿಯಂದು ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದದೊಂದಿಗೆ ಕೃತಾರ್ಥರಾಗುತ್ತಾರೆ.

ಇಷ್ಟಾರ್ಥ ಸಿದ್ಧಿಯ ಮಹಾಗಣಪತಿ: ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಪಡುಬಿದ್ರಿ ಗಣಪತಿಯು ಹಲವಾರಿ ವಿಶೇಷ ಸೇವೆಗಳಿಂದ ಪೂಜಿಸಲ್ಪಡುತ್ತಾನೆ.ಶ್ರೀ ದೇವಳದಲ್ಲಿ ಶ್ರೀ ಮಹಾಲಿಂಗೇರ್ಶವರನು ಪ್ರಧಾನ ದೇವರಾದರೂ ಪಡುಬಿದ್ರಿ ದೇವಳದಲ್ಲಿ ವಿಶೇಷ ಸೇವೆಗಳೆಲ್ಲಾ ಶ್ರೀ ಮಹಾಗಣಪತಿಗೆ ಸಲ್ಲುವುದು ಇಲ್ಲಿನ ವಿಶೇಷ.

ಪಂಚಕಜ್ಜಾಯ : ಶ್ರೀ ಮಹಾಗಣಪತಿಗೆ ಪಂಚಕಜ್ಜಾಯ ಸೇವೆ ಬಲು ಇಷ್ಟವಾದ ಸೇವೆ.ಬಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಂಚಕಜ್ಜಾಯ ಸಲ್ಲಿಸುತ್ತಾರೆ.ಮಳೆಗಾಲದಲ್ಲಿ ಮಳೆ ನಿಲ್ಲದೆ ಇದ್ದ ಸಂದರ್ಭ ಪಡುಬಿದ್ರಿ ಶ್ರೀ ಮಹಾಗಣಪತಿಗೆ ಪಂಚಕಜ್ಜಾಯ ಸೇವೆ ಸಲ್ಲಿಸಿದರೆ ಮಳೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಭಕ್ತರ ನಂಬಿಕೆ.

ಪೊಟ್ಟಪ್ಪ ಸೇವೆ: ಬ್ರಿಟಿಷ್ ದೊರೆಯೊಬ್ಬ ದೇವಳದ ಮುಂಭಾಗ ಕುದುರೆಯೇರಿ ಹೊರಟಾಗ ಕುದುರೆ ಮುರ್ಛಾವಸ್ಥೆಗೆ ಹೋಯಿತು.ವಿಸ್ಮಯಗೊಂಡ ದೊರೆ ತಕ್ಷಣ ದೇವಳದ ಅರ್ಚಕರನ್ನು ಕರೆಸಿ ತೀರ್ಥ ಸಂಪ್ರೋಕ್ಷಣೆ ಮಾಡಿಸಿದನಂತೆ.ಕುದುರೆ ಚೇತರಿಸಿಕೊಂಡು ಹಿಂದಿನಮತೆ ಸವಾರಿಗೆ ಸಿದ್ಧವಾಯಿತು.ಗಣಪತಿಗೆ ಪೊಟ್ಟಪ್ಪ ಸೇವೆ ವಿಶೇಷ ಹರಕೆ ಎಂಬುದನ್ನು ತಿಳಿದ ಆತ ಅದರ ವ್ಯವಸ್ಥೀಕರಣಕ್ಕೆ ಉಂಬಳಿಯನ್ನು ಬಿಟ್ಟಿದ್ದನು.ಅಂದಿನಿಂದಲೂ ಈ ಸೇವೆ ನಡೆಯುತ್ತಾ ಬಂದಿದೆ.
ಕಟಾಹಾಪೂಪ(ಕಟ್ಟದಪ್ಪ) ಸೇವೆ: ಶ್ರೀ ದೇವಳದಲ್ಲಿ ಶ್ರೀ ಮಹಾಗಣಪತಿಗೆ ಸಹಸ್ರಾರು ಸಂಖ್ಯೆಯ ಭಕ್ತರು ಆಷಾಡಾ ಮಾಸದಲ್ಲಿ ಸಲ್ಲಿಸುವ ಕಟಾಹಾಪೂಪ(ಕಟ್ಟದಪ್ಪ) ಸೇವೆ ಜನಜನಿತ.ಲಕ್ಷಕ್ಕೂ ಅಧಿಕ ಕಟ್ಟದಪ್ಪ ತಯಾರಿಸಿ ಮಹಾಗಣಪತಿಗೆ ಸಮರ್ಪಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಂತಹ ಪದ್ಧತಿ.


ಪಡುಬಿದ್ರಿಯಲ್ಲಿ ತಳುಕಿ ಬಳುಕಿ ಹರಿಯುವ ಕಾಮಿನಿ ಹೊಳೆಯಲ್ಲಿ ಹಿಂದಿನ ಕಾಲದಲ್ಲಿ ಕೃಷಿಕರು ಕಟ್ಟ(ಒಡ್ಡು) ಕಟ್ಟಿ ಮಳೆ ನೀರು ಸಂಗ್ರಹಿಸುವ ಪದ್ಧತಿ ಚಾಲ್ತಿಯಲ್ಲಿತ್ತು.ಆದರೆ ನೀರಿನ ಸೆಳೆತಕ್ಕೆ ಕಟ್ಟ ಪದೇಪದೇ ಒಡೆದು ಹೋಗುತ್ತಿದ್ದ ಕಾರಣ ಗ್ರಾಮ ದೇವಳಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರೀ ಮಹಾಗಣಪತಿಗೆ ಅಪ್ಪಸೇವೆ ಸಲ್ಲಿಸಿದ ಬಳಿಕ ಕಟ್ಟ ಸ್ಥಿರವಾಗಿ ನಿಂತಿತು ಎಂದು ಹಿರಿಯರು ಹೇಳುವ ಮಾತು.ಮುಂದೆ ಪ್ರತಿ ವರ್ಷ ಕೃಷಿಕರು ಅಪ್ಪ ಸೇವೆ ನಿಡುತ್ತಾ ಬಂದಿದ್ದು,ಇಂದು ಸಾರ್ವಜನಿಕ ನೆಲೆಯಲ್ಲಿ ಶ್ರೀ ದೇವರಿಗೆ ಅದ್ದೂರಿಯಾಗಿ ಸಮರ್ಪಿಸಲ್ಪಡುತ್ತಿದೆ.ಈ ಸೇವೆಯಲ್ಲಿ ದೇಶ ವಿದೇಶಗಳಿಂದ ಭಕ್ತರು ಸೇವೆ ನೀಡಿ ಕೃತಾರ್ಥರಾಗುತ್ತಾರೆ.

ವರ್ಷಾವಧಿ ಉತ್ಸವ: ಶ್ರೀ ದೇವಳದಲ್ಲಿ ಪ್ರತೀ ವರ್ಷ ಮಾರ್ಚ್ 21 ರಂದೇ ವರ್ಷಾವಧಿ ಉತ್ಸವ ನಡೆಯುತ್ತದೆ.ನಡ್ಸಾಲು-ಪಡುಬಿದ್ರಿಯ ಪ್ರತಿಯೊಬ್ಬರೂ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ.ದೂರದೂರುಗಳಲ್ಲಿ ವಾಸವಿರುವ ಸ್ಥಳೀಯರೂ ಉತ್ಸವ ಸಂದರ್ಭ ಗ್ರಾಮಕ್ಕೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

 

ಚೆಂಡು ಉತ್ಸವ:  ಪಡುಬಿದ್ರಿ ದೇವಳದ ವಾರ್ಷಿಕ ಉತ್ಸವದ ಮರುದಿನ ಸಂಜೆ ನಡೆಯುವ ಚೆಂಡು ಉತ್ಸವವೂ ಬಲು ಪ್ರಸಿದ್ಧಿ.
ಎರಡು ತಂಡಗಳಾಗಿ ಭಾಗವಹಿಸಿ ಚೆಂಡು ಉತ್ಸವದಲ್ಲಿ ಪಾಲ್ಗೊಳ್ಳಲೆಂದೇ ಪಡುಬಿದ್ರಿಗರು ದೂರದೂರುಗಳಿಂದ ಆಗಮಿಸುತ್ತಾರೆ.ಒಂದು ಬಾರಿಯಾದರೂ ಚೆಂಡು ಕಾಲಿಗೆ ಸ್ಪರ್ಷಿಸಬೇಕೆಂದು ಹಂಬಲಿಸಿ ಚೆಂಡು ತಾಕಿದಾಕ್ಷಣ ಧನ್ಯತಾ ಭಾವ ಹೊಂದುತ್ತಾರೆ.

 

ಪಡುಬಿದ್ರಿಯಲ್ಲಿ ಗುಡ್ಡೆಗಣಪತಿ,ಕೊಂಬೆಟ್ಟು ಗಣಪತಿ ಎಂದು ಹೇಳಲಾಗುವ ಬಾಲಗಣಪತಿ,ಉದಯಾದ್ರಿ ಗಣಪತಿ ಸನ್ನಿಧಾನಗಳಿದ್ದು,ಚೌತಿಯಂದು ವಿಶೇಷ ಪೂಜೆ ಸಲ್ಲಲ್ಪಡುತ್ತದೆ.

ಚಿತ್ರಗಳು: ರವಿ ಡಿಜಿಟಲ್ಸ್,ಪಡುಬಿದ್ರಿ.