ಪಡುಬಿದ್ರಿ: ಹಿರಿಯ ನಾಗರಿಕರ ಸಭೆ

ಪಡುಬಿದ್ರಿ : ರಸ್ತೆ ದಾಟುವ ಸಂದರ್ಭ ಹಿರಿಯ ನಾಗರಿಕರು ಕಿರಿಯ ಸಹಾಯ ಪಡೆದು ಸುರಕ್ಷತೆಗೆ ಗಮನಹರಿಸಬೇಕು. ಮನೆಯಲ್ಲಿರುವ ಕಿರಿಯರಿಗೆ ವಾಹನ ಚಲಾವಣೆ ವೇಳೆ ವಾಹನದ ಸರಿಯಾದ ದಾಖಲೆ ಪತ್ರಗಳನ್ನಿಟ್ಟುಕೊಂಡು ಜಾಗೃತರಾಗಿ ಸಂಚರಿಸುವಂತೆ ಎಚ್ಚರಿಕೆ ನೀಡಬೇಕು ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್‍ಐ ಉದಯ ರವಿ ನೀಡಿದರು.

ಪಡುಬಿದ್ರಿ ಗ್ರಾಮ ಪಂಚಾಯಿತಿಯ 3 ಮತ್ತು 4ನೇ ವಾರ್ಡ್‍ನ ಪೊಲೀಸ್ ಬೀಟ್ ಸಮಿತಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಗಾಲ ಸಮಯದಲ್ಲಿ ಕಳ್ಳತನ ನಡೆಯದಂತೆ ಮನೆ ಹಾಗೂ ದೈವ-ದೇವಸ್ಥಾನಗಳ ಭದ್ರತೆಗೆ ಗಮನಹರಿಸುವಂತೆ ಅಲ್ಲಿನ ಆಡಳಿತ ಮಂಡಳಿಗೆ ಸೂಚಿಸಬೇಕು. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ನೆರೆಹೊರೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯಲ್ಲಿನ ಕಿರಿಯರೊಂದಿಗೆ ಉತ್ತಮ ಬಾಂಧವ್ಯವನ್ನಿರಿಸಿಕೊಳ್ಳಬೇಕು. ಹಿರಿಯರಿಗಾಗಿ ಸಿಗುವ ಸರ್ಕಾರದ ಯೋಜನೆಗಳ ಮಾಹಿತಿ ಪಡೆದುಕೊಳ್ಳಬೇಕು. ಮನೆ ಬಿಟ್ಟು ದೂರದೂರಿಗೆ ತೆರಳುವಾಗ ಪೊಲೀಸರು ಅಥವಾ ನಂಬಿಗಸ್ಥರಿಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು.

ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಸಭೆ ನಡೆಯಬೇಕು. ಸರ್ಕಾರದಿಂದ ನೀಡಲ್ಪಡುವ ಯಾವುದೇ ರೀತಿಯ ಗುರುತು ಕಾರ್ಡ್‍ಗಳ ಬಗ್ಗೆ ನಿರ್ಲಕ್ಷ್ಯ ತಾಳದೆ, ಅವೆಲ್ಲವನ್ನು ಪಡೆದುಕೊಳ್ಳಿ ಎಂದು ಗ್ರಾಪಂ ಅಧ್ಯಕ್ಷೆ ದಮಯಂತಿ ವಿ ಅಮೀನ್ ತಿಳಿಸಿದರು.

ಪಹಣಿ ಪತ್ರ ಹೊಂದಿದ ಪ್ರತಿಯೊಬ್ಬ ಕೃಷಿಕರು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಾಗಿದ್ದಾರೆ. ಜೂನ್ 25ರಿಂದ ಅದರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಮಾಹಿತಿ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ನೇತ್ರಾವತಿ ಶೆಟ್ಟಿ, ಸದಸ್ಯರಾದ ಜಾನಕಿ, ರವೀಂದ್ರ, ಪೊಲೀಸ್ ಬೀಟ್ ಸಮಿತಿ ಮೇಲುಸ್ತುವಾರಿ ಅಧಿಕಾರಿ ದಿವಾಕರ ಸುವರ್ಣ, ವಾರ್ಡ್ ಸಮಿತಿ ಪೊಲೀಸ್ ಸಿಬ್ಬಂದಿ ಯೋಗೀಶ್ ಉಪಸ್ಥಿತರಿದ್ದರು. ಲೋಹಿತಾಕ್ಷ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.