ಹೆದ್ದಾರಿ ಕಾಮಗಾರಿ ವಿರುದ್ಧ ಪಡುಬಿದ್ರಿಯಲ್ಲಿ ಪ್ರತಿಭಟನೆ -ಎ.15 ರೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆ

ಕಾಮಗಾರಿ ವಿರುದ್ಧ ಪಡುಬಿದ್ರಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಗ್ರಾಮ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳು ಒಗ್ಗೂಡಿ ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮ ವ್ಯಾಪ್ತಿಯ ಸರ್ವಿಸ್ ರಸ್ತೆ, ಕಲ್ಸಂಕ, ದಾರಿದೀಪ, ಚರಂಡಿ ಕಾಮಗಾರಿಗಳನ್ನು ನಿರ್ವಹಿಸಿಲ್ಲ. ಚರಂಡಿ ನಿರ್ಮಾಣಕ್ಕೆಂದು ರಸ್ತೆ ಬದಿಗಳನ್ನು ಅಗೆದು ಹಲವು ತಿಂಗಳುಗಳೇ ಕಳೆದಿವೆ. ಈಗಾಗಲೇ ಹಲವಾರು ಅವಘಡಗಳು ಸಂಭವಿಸಿದೆ. ಎರಡು ತಿಂಗಳ ಹಿಂದೆ ಗ್ರಾಪಂ ವತಿಯಿಂದ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿ ನವಯುಗ್ ಕಂಪನಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಆ ಬಳಿಕ ಈ ಭಾಗದಲ್ಲಿ ನಯಾಪೈಸೆಯ ಕಾಮಗಾರಿ ನಿರ್ವಹಿಸಿಲ್ಲ. ಇದರಿಂದ ನಿತ್ಯ ಪಡುಬಿದ್ರಿಯಲ್ಲಿ ಸಂಚಾರ ವ್ಯವಸ್ಥೆ ಸಮಸ್ಯೆಯಾಗಿದೆ. ಹಾಗಾಗಿ ಪಡುಬಿದ್ರಿ ಭಾಗದ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಪಡುಬಿದ್ರಿ-ಕಾರ್ಕಳ ಕೂಡುರಸ್ತೆಯಲ್ಲಿ ಟೆಂಟ್ ಅಳವಡಿಸಿ ಶಾಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಬೇಕಾಬಿಟ್ಟಿ ಜಾಗ ಖರೀದಿಸಿದ್ದು, ಮೂಲ ನಕಾಶೆಯಂತೆ ಹೆದ್ದಾರಿ ನಿರ್ಮಾಣ ನಿರ್ವಹಿಸಿಲ್ಲ. ಟೆಂಡರ್ ಅವಧಿ ಮುಕ್ತಾಯವಾಗಿದ್ದು, ಕಾನೂನು ಉಲ್ಲಂಘನೆಯಾಗಿದೆ. ಅತ್ಯಾಧುನಿಕ ಮಾದರಿಯ ಟೋಲ್ ನಿರ್ಮಿಸಿದ ನವಯುಗ ಕಂಪನಿಗೆ ಸೂಕ್ತ ರಸ್ತೆ ನಿರ್ಮಾಣ ಅಸಾಧ್ಯವಾಗಿದೆ. ನಮ್ಮ ಜನ ಶಾಂತಿ ಪ್ರಿಯರು. ನಮ್ಮ ಹಕ್ಕಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ನಿಗದಿತ ದಿನದೊಳಗೆ ಕಾಮಗಾರಿ ನಿರ್ವಹಿಸದಿದ್ದರೆ, ಎಲ್ಲರೂ ಒಗ್ಗೂಡಿ ನಿರ್ಣಾಯಕ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಮಾತನಾಡಿ, ನಮ್ಮ ಯಾವುದೇ ಬೇಡಿಕೆ ಈಡೇರಿಸದ ನವಯುಗ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಎಪ್ರಿಲ್ 15ರೊಳಗೆ ಪಡುಬಿದ್ರಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೆದ್ದಾರಿ ಬಂದ್ ಸಹಿತ ಉಗ್ರ ಹೋರಾಟಕ್ಕೆ ಅಣಿಯಾಗಲಿದ್ದೇವೆ. ಜಿಲ್ಲಾಡಳಿತ ಈ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಿಜೆಪಿ ಕಾಪು ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಗ್ರಾಮವ್ಯಾಪ್ತಿಯ ಎಲ್ಲರೂ ಒಗ್ಗೂಡಿ ಪ್ರತಿಭಟಿಸಿದರೆ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಮುಂದೆ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗೋಣ ಎಂದರು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ದಸಂಸ ಕಾಪು ತಾಲೂಕು ಸಂಚಾಲಕ ಲೋಕೇಶ್ ಕಂಚಿನಡ್ಕ, ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಕಾರು ಚಾಲಕ-ಮಾಲಕ ಸಂಘದ ಅಧ್ಯಕ್ಷ ರವಿ ಶೆಟ್ಟಿ, ಜೇಸಿಐ ಪಡುಬಿದ್ರಿ ಪೂರ್ವಾಧ್ಯಕ್ಷ ಜಯ ಎಸ್.ಶೆಟ್ಟಿ ಪದ್ರ, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ ಹೆಜಮಾಡಿ, ದಲಿತ ಮುಖಂಡ ಉಮಾನಾಥ ಪಡುಬಿದ್ರಿ, ವ್ಯಾಪಾರಸ್ಥರ ಪರವಾಗಿ ಶ್ರೀನಾಥ್ ಹೆಗ್ಡೆ ಮಾತನಾಡಿದರು.

ಮನವಿ: ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನವಿಯನ್ನು ಶೀಘ್ರ ಜಿಲ್ಲಾಧಿಕಾರಿ ಗಮನಕ್ಕೆ ತಂದು ಹೆದ್ದಾರಿ ಇಲಾಖೆ ಮತ್ತು ನವಯುಗ್ ಕಂಪನಿ ಮುಖ್ಯಸ್ಥರ ಜತೆ ಸಮಾಲೋಚನಾ ಸಭೆ ನಿದಗಿಪಡಿಸಲಾಗುವುದು. ಸಮಸ್ಯೆಯ ಗಂಭೀರತೆ ಮನದಟ್ಟಾಗಿದ್ದು, ಶೀಘ್ರ ಹೆದ್ದಾರಿ ಕಾಮಗಾರಿಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ವಿಶುಕುಮಾರ್ ಶೆಟ್ಟಿಬಾಲ್, ಸಂತೋಷ್ ಶೆಟ್ಟಿ, ಮಿಥುನ್ ಆರ್.ಹೆಗ್ಡೆ, ಸಾಂತೂರು ಭಾಸ್ಕರ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಜೇಸಿಐ ಅಧ್ಯಕ್ಷ ಪ್ರದೀಪ್ ಆಚಾರ್ಯ, ರೋಟರಿ ಅಧ್ಯಕ್ಷ ರಿಯಾಝ್ ಮುದರಂಗಡಿ, ಲಯನ್ಸ್ ಕಾರ್ಯದರ್ಶಿ ಕಪಿಲ್ ಕುಮಾರ್, ಶಿಬಿನ್ ಶೆಟ್ಟಿ, ನಿಶ್ಮಿತಾ ಪಿ.ಎಚ್., ಡಾ.ವೈ.ಎನ್.ಶೆಟ್ಟಿ, ಲೀಲಾಧರ ಸಾಲ್ಯಾನ್, ನವೀನ್ ಎನ್.ಶೆಟ್ಟಿ, ಬುಡಾನ್ ಸಾಹೇಬ್, ಕೌಸರ್, ಸ್ತ್ರೀ ಶಕ್ತಿ-ಸ್ವಸಹಾಯ ಸಂಘ, ಅರಾಫಾ ಬಾಯ್ಸ್ ಕಂಚಿನಡ್ಕ, ಮುಸ್ಲಿಮ್ ವೆಲ್‍ಫೇರ್, ಎಸ್‍ಎಸ್‍ಎಫ್ ಕನ್ನಂಗಾರ್ ಪ್ರಮುಖರು, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಪಡುಬಿದ್ರಿಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಪು ನಿರೀಕ್ಷಕ ಮಹೇಶ್ ಪ್ರಸಾದ್, ಕಾರ್ಕಳ ನಿರೀಕ್ಷಕ ಸಂಪತ್, ಪಡುಬಿದ್ರಿ ಉಪನಿರೀಕ್ಷಕ ಸುಬ್ಬಯ್ಯ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ನಡೆಸಲಾಗಿತ್ತು.
ಫೋಟೋ:11ಎಚ್‍ಕೆ1