Protest against sudden collection of toll at Hejmady Interior road

Padubidri, September 1st, 2018: Highway contractors Navyug Constructions has started collecting toll all of a sudden at the interior road in Hejmady by constructing a new toll plaza in order to collect toll from those vehicles evading toll by taking this alternative route.  The toll collection started on Saturday morning under  police protection by Padubidri police.  In response to this sudden development, Rashtreeya Heddari Horata Samiti has opposed this move and has decided to stage a protest on Sunday.

Full news in Kannada …

ಹೆಜಮಾಡಿ ಒಳ ರಸ್ತೆಗೆ ಏಕಾಏಕಿ ಟೋಲ್: ಭಾನುವಾರ ಹೋರಾಟ ಸಮಿತಿ ಪ್ರತಿಭಟನೆ

ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಕಂಪನಿಯ ಟೋಲ್ ಪ್ಲಾಝಾದಲ್ಲಿ ಟೋಲ್ ತಪ್ಪಿಸಿ ಹಳೇ ಎಮ್‍ಬಿಸಿ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಗೆ ಪ್ರತ್ಯೇಕ ಟೋಲ್ ಪ್ಲಾಝಾ ನಿರ್ಮಿಸಿ ಶನಿವಾರದಿಂದ ಏಕಾಏಕಿ ಟೋಲ್ ಸಂಗ್ರಹ ಆರಂಭಿಸಿದ್ದು,ಇದನ್ನು ಪ್ರತಿಭಟಿಸಿ ರಾಹೆ ಹೋರಾಟ ಸಮಿತಿಯು ಭಾನುವಾರ ಬೆಳಿಗ್ಗೆ ಪ್ರತಿಭಟನೆ ಹಮ್ಮಿಕೊಂಡಿದೆ.
ಶನಿವಾರ ಬೆಳಿಗ್ಗೆ ನವಯುಗ್ ಕಂಪನಿಯ ಅಧಿಕಾರಿಗಳು ಪಡುಬಿದ್ರಿ ಪೋಲೀಸರ ಬಂದೋಬಸ್ತ್‍ನಲ್ಲಿ ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದರು.


ಕಳೆದ ಒಂದೂವರೆ ವರ್ಷಗಳಲ್ಲಿ ಟೋಲ್ ತಪ್ಪಿಸಿ ಸಹಸ್ರಾರು ವಾಹನಗಳು ಒಳ ರಸ್ತೆಯಲ್ಲಿ ಚಲಿಸಿ ರಸ್ತೆಯನ್ನು ಸಂಪೂರ್ಣ ಹಾಳುಗೆಡಹಿದ್ದರು.ನವಯುಗ್ ಕಂಪನಿಯು ಒಳ ರಸ್ತೆಯಲ್ಲಿ ಸಂಚರಿಸಿ ಟೋಲ್ ತಪ್ಪಿಸುವ ಮೂಲಕ ಕೋಟ್ಯಾಂತರ ನಷ್ಟವುಂಟು ಮಾಡಿದ್ದಾರೆಂದು ಆರೋಪಿಸಿ ಹೆದ್ದಾರಿ ಇಲಾಖೆಗೆ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಒಳ ರಸ್ತೆಗೆ ಪ್ರತ್ಯೇಕ ಟೋಲ್ ನಿರ್ಮಿಸುವಂತೆ ನವಯುಗ್ ಕಂಪನಿಗೆ ಅನುಮತಿ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಬೆಂಬಲದೊಂದಿಗೆ ಶನಿವಾರ ಟೋಲ್ ಸಂಗ್ರಹ ಆರಂಭಗೊಂಡಿತ್ತು.

ಹಲವರಿಗೆ ತೊಂದರೆ: ಈ ರಸ್ತೆಯಲ್ಲಿ ನೂರಾರು ಶಾಲಾ ಬಸ್ಸುಗಳು,ಸರ್ವಿಸ್ ಬಸ್ಸುಗಳು ದಿನನಿತ್ಯ ಸಂಚರಿಸುತ್ತಿವೆ.ಶನಿವಾರ ಏಕಾಏಕಿ ಟೋಲ್ ಸಂಗ್ರ ಆರಂಭಗೊಂಡ ಕಾರಣ ಅವರೆಲ್ಲಾ ಟೋಲ್ ನೀಡಲು ನಿರಾಕರಿಸಿದ್ದಾರೆ.ಹೆಜಮಾಡಿಯಲ್ಲಿ ಕಾರ್ಯಾಚರಿಸುವ ಸಣ್ಣ ಟೆಂಪೋಗಳೂ ಟೋಲ್ ನೀಡಲು ಅಸಾಧ್ಯವೆಂದು ಟೋಲ್ ನೀಡಲು ನಿರಾಕರಿಸಿದ್ದಾರೆ.ಸ್ಥಳೀಯ ವಾಹನ ಚಾಲಕರು ಟೋಲ್ ಮ್ಯಾನೇಜರ್ ರವಿಬಾಬುರವರನ್ನು ಸಂಪರ್ಕಿಸಿ ತಮಗೆ ರಿಯಾಯತಿ ನೀಡುವಂತೆ ವಿನಂತಿಸಿದ್ದು,ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಹೆಜಮಾಡಿಕೋಡಿಗೆ ತೆರಳುವ ಬಸ್ಸುಗಳಿಗೆ ವಾರ್ಷಿಕ ಅತೀ ಕಡಿಮೆ ದರದ ಪಾಸ್ ನೀಡುವುದಾಗಿಯೂ ರವಿಬಾಬು ಹೇಳಿದ್ದಾರೆ.ದಿನನಿತ್ಯ ಸಂಚರಿಸುವ ಸರ್ವಿಸ್ ಬಸ್ಸುಗಳು ಮಾಸಿಕ ಪಾಸ್ ಪಡೆಯುವಂತೆ ವಿನಂತಿಸಿದ್ದಾರೆ.

ಕೆಎ20 ರಿಯಾಯಿತಿ ಅಬಾಧಿತ: ಇದೇ ವೇಳೆ ಉಡುಪಿ ಜಿಲ್ಲಾ ನೋಂದಣಿಯ ವಾಹನಗಳಿಗೆ ಟೋಲ್ ಫ್ರೀ ಅಬಾಧಿತವಾಗಿದೆ ಎಂದು ರವಿಬಾಬು ತಿಳಿಸಿದ್ದು,ಹೆಜಮಾಡಿಯ ಜನತೆ ಬೇರೆ ನೋಂದಣಿಯ ವಾಹನಗಳಲ್ಲಿ ಪ್ರಯಾಣಿಸಿದರೂ ಸ್ಥಳೀಯ ದಾಖಲೆಗಳನ್ನು ಪ್ರದರ್ಶಿಸಿ ಸಂಚರಿಸಬಹುದೆಂದು ತಿಳಿಸಿದ್ದಾರೆ.

ಭಾನುವಾರ ಪ್ರತಿಭಟನೆ: ಏಕಾಏಕಿ ಟೋಲ್ ಸಂಗ್ರಹ ಆರಂಭಿಸಿದ ಸಂದರ್ಭ ಅವಿಭಜಿತ ದಕ ಜಿಲ್ಲಾ ರಾ.ಹೆ.ಹೋರಾಟ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ ಟೋಲ್ ಪ್ಲಾಝಾಗೆ ಆಗಮಿಸಿ ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸುವ ತನಕ ಟೋಲ್ ಸಂಗ್ರಹ ಮಾಡಕೂಡದು.ತಕ್ಷಣ ಒಳ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಜಿಲ್ಲಾಡಳಿತದ ಆದೇಶದಂತೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ.ಮಾತುಕತೆ ಇದ್ದಲ್ಲಿ ನೇರ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವಂತೆ ವಿನಂತಿಸಿದರು.

ಈ ಬಗ್ಗೆ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಶೇಖರ್ ಹೆಜ್ಮಾಡಿ,ಎಲ್ಲರ ಅಭಿಪ್ರಾಯದಂತೆ ಭಾನುವಾರ ಬೆಳಿಗ್ಗೆ ಟೋಲ್ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದೆಂದು ಹೇಳಿದ್ದಾರೆ.
ಟೋಲ್ ಸಂಗ್ರಹಕ್ಕೆ ಮುನ್ನ ಸ್ಥಳೀಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದ್ದು,ಬಳಿಕ ಟೋಲ್ ಸಂಗ್ರಹಕ್ಕೆ ತಮ್ಮ ವಿರೋಧವಿಲ್ಲ ಎಂದಿದ್ದಾರೆ.ಹೆಜಮಾಡಿಯ ಒಳ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು,ನವಯುಗ್ ಕಂಪನಿಯು ಟೋಲ್ ಸಂಗ್ರಹಿಸುವಂತಿಲ್ಲ ಎಂದವರು ಹೇಳಿದ್ದಾರೆ.

ಪರ ವಿರೋಧ ಅಭಿಪ್ರಾಯ: ನವಯುಗ್ ಕಂಪನಿಯು ಹೆಜಮಾಡಿ ಹೆದ್ದಾರಿಯಲ್ಲಿ ಟೋಲ್ ಪ್ಲಾಝಾ ಆರಂಭಿಸಿದ ಬಳಿಕ ಸಹಸ್ರಾರು ವಾಹನಗಳು ಹೆಜಮಾಡಿ ಒಳ ರಸ್ತೆಯಲ್ಲಿ ನಿರಂತರ ಚಲಿಸಿದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಒಂದು ಕಿರು ಸೇತುವೆಯೂ ಮುರಿದಿದೆ.ಹಾಗಾಗಿ ಒಳ ರಸ್ತೆಗೆ ಟೋಲ್ ಪ್ಲಾಝಾ ನಿರ್ಮಿಸಿದ್ದು ಅತ್ಯುತ್ತಮ ನಿರ್ಧಾರವೆಂದು ಹಲವರು ಅಭಿಪ್ರಾಯಿಸಿದ್ದಾರೆ.ಸ್ಥಳೀಯ ಬಸ್ಸು,ಶಾಲಾ ಬಸ್ಸು ಹಾಗೂ ಗೂಡ್ಸ್ ವಾಹನಗಳು ಹೆಜಮಾಡಿಗೆ ಬರುವ ಕಾರಣ ಅವುಗಳಿಗೆ ಟೋಲ್ ಪ್ಲಾಝಾದಿಂದ ತೀವ್ರ ತೊಂದರೆಯಾಗಲಿದ್ದು ಅವುಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಹಲವರು ಹೇಳಿದ್ದಾರೆ.