ಮೂಲ್ಕಿ – 500ಕ್ಕೂ ಅಧಿಕ ಆಹಾರ ದವಸ ಧಾನ್ಯಗಳ ಕಿಟ್‍ಗಳ ಹಸ್ತಾಂತರ

ಮೂಲ್ಕಿ: ದಿನ ಕೂಲಿ ಕಾರ್ಮಿಕರಿಗೆ ಕರೋನಾ ಲಾಕ್‍ಡೌನ್‍ನಿಂದ ಯಾವುದೇ ರೀತಿ ಸಮಸ್ಯೆ ಬಾರದಂತೆ ಮೂಲ್ಕಿ ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ ದಾನಿಗಳ ಸಹಕಾರದಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಅಕ್ಕಿ ದವಸ ಧಾನ್ಯ ವಿತರಣಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸರಕಾರದ ಮತ್ತು ಖಾಸಗಿ ಸಂಸ್ಥೆಗಳ ಸಹಕಾರದಿಂದ ಬರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಲ್ಕಿ ನಗರ ಪಂಚಾಯಿತಿಯಲ್ಲಿ ಶಾಸಕರ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ದಾನಿಗಳ ಸಹಕಾರದಲ್ಲಿ ಸುಮಾರು 3.5ಲಕ್ಷರೂ ವೆಚ್ಚದಲ್ಲಿ 500ಕ್ಕೂ ಅಧಿಕ ಆಹಾರ ದವಸ ಧಾನ್ಯಗಳ ಕಿಟ್‍ಗಳನ್ನು ಶನಿವಾರ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭ 20ಕೆಜಿ.ಅಕ್ಕಿ,ದವಸ ಧಾನ್ಯಗಳು,ಸಕ್ಕರೆ,ಚಾ ಹುಡಿ,ಉಪ್ಪು ಹಾಗೂ ಇನ್ನತಿತರ ಉಪಯುಕ್ತ ವಸ್ತುಗಳನ್ನು ಹೊಂದಿರುವ ಕಿಟ್‍ಗಳನ್ನು ಶಾಸಕರ ನೇತ್ರತ್ವದಲ್ಲಿ ಮೂಲ್ಕಿ ನಗರ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.

ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಂ ಮಾತನಾಡಿ,ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಆರಂಭಗೊಂಡಿದ್ದು ಮುಂದಿನ ವಾರದಲ್ಲಿ ಎಲ್ಲಾ ಕಡೆಯಲ್ಲಿಯೂ ವಿತರಣೆ ನಡೆಯಲಿದೆ. ಪ್ರತಿನಿತ್ಯ ಅರ್ಧದಿನ ಪಡಿತರ ನೀಡಲಾಗುತ್ತಿದ್ದು ಗ್ರಾಹಕರು ಅವಸರಿಸದೆ ಸಹಕರಿಸಬೇಕಾಗಿ ವಿನಂತಿಸಿದರು.
ಗ್ರಾಮೀಣ ಬಡವರ್ಗ, ಕೊಳಚೆ ಪ್ರದೇಶ ನಿವಾಸಿಗಳು, ನಿರ್ಗತಿಗರಿಗೆ ಸರಕಾರದ ವತಿಯಿಂದ ಹಾಲು ವಿತರಿಸಲಾಗುತ್ತಿದ್ದು ಮೂಲ್ಕಿಯಲ್ಲಿ ಅರ್ಧ ಲೀ.ನ 850 ಹಾಲಿನ ಪ್ಯಾಕೆಟ್ ವಿತರಿಸಲಾಗಿದೆ ಎಂದು ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರ ಪೂಜಾರಿ ತಿಳಿಸಿದರು.

ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್ ಆಳ್ವಾ, ಮೂಲ್ಕಿ ರೋಟರಿ ಅಧ್ಯಕ್ಷ ಲಿಯಾಖತ್ ಆಲಿ, ಮೂಲ್ಕಿ ಲಯನ್ಸ್ ಅಧ್ಯಕ್ಷ ವೆಂಕಟೇಶ ಹೆಬ್ಬಾರ್,ತಾಪಂ ಸದಸ್ಯ ಶರತ್ ಕುಬೆವೂರು,ಆರೋಗ್ಯ ಅಧಿಕಾರಿ ಲಿಲ್ಲಿ ನಾಯರ್, ವಿ.ಎ ಪ್ರದೀಪ್ ಶೆಣೈ,ಮೂಲ್ಕಿ ನಗರ ಪಂಚಾಯಿತಿ ಸದಸ್ಯರು ಮತ್ತಿತರರಿದ್ದರು.
ಕ್ಯಾಪ್ಶನ್: ಮೂಲ್ಕಿ ನಗರ ಪಂಚಾಯಿತಿಯಲ್ಲಿ ಶಾಸಕರ ನೇತ್ರತ್ವದಲ್ಲಿ ದಾನಿಗಳಿಂದ ಸಂಗ್ರಹಿಸಲಾದ ಅಕ್ಕಿ ದವಸ ಧಾನ್ಯ ಕಿಟ್ ನಗರ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.