ಯುವ ಸಮಾಜದ ಸಬಲೀಕರಣಕ್ಕಾಗಿ ವ್ಯಕ್ತಿತ್ವ ವಿಕಸನ ತರಬೇತಿ ಅಗತ್ಯ-ಆಶೋಕ್ ಶೆಟ್ಟಿ

ಪಡುಬಿದ್ರಿ: ಯು ಸಮಾಜ ಸಾಮಾಜಿಕ ಜಾಲತಾಣಗಳ ಬದಲು ವ್ಯಕ್ತಿತ್ವ ವಿಕಸನಗೊಳಿಸುವ ತರಬೇತಿಗಳನ್ನು ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಆಸ್ಪಿನ್ ಸೆಝ್(ಸುಜ್ಲಾನ್) ಘಟಕದ ಜನರಲ್ ಮ್ಯಾನೇಜರ್ ಅಶೋಕ್ ಶೆಟ್ಟಿ ಹೇಳಿದರು.

ಪಡುಬಿದ್ರಿ ಬೋರ್ಡ್ ಶಾಲಾ(ಕೆಪಿಎಸ್) ಮೈದಾನಲ್ಲಿ ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹ-2019ರ ಸಮಾರೋಪ ಸಮಾರಂಭ ಜೇಸಿಐ ವಿಶೇಷ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, 44 ವರ್ಷಗಳ ಇತಿಹಾಸದ ಜೇಸಿಐ ಪಡುಬಿದ್ರಿಯ ಕಳೆದ 43 ಅಧ್ಯಕ್ಷರುಗಳು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮವಹಿಸುತ್ತಿರುವ ಕಾರಣ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದರು.

ಗೃಹ ಪತ್ರಿಕೆ ಸರ್ಚ್‍ಲೈಟ್ ಬಿಡುಗಡೆ: ಇದೇ ಸಂದರ್ಭ ಜೇಸಿಐ ಪಡುಬಿದ್ರಿಯ ಗೃಹ ಪತ್ರಿಕೆ ಸಂತೃಪ್ತಿ ಮನೋಜ್ ಶೆಟ್ಟಿ ಸಂಪಾದಕತ್ವದ “ಸರ್ಚ್‍ಲೈಟ್”ನ್ನು ಬಿಡುಗಡೆಗೊಳಿಸಲಾಯಿತು.

ಪ್ರಶಸ್ತಿ ವಿತರಣೆ: ಜೇಸಿಐ ಪಡುಬಿದ್ರಿ ಮತ್ತು ಸಾಯಿರಾಧಾ ಟಿವಿಎಸ್ ವತಿಯಿಂದ ಹಮ್ಮಿಕೊಂಡ ದ್ವಿಚಕ್ರ ವಾಹನಗಳ ನಿಧಿ ಶೋಧ ವಿಜೇತರಾದ ಯೋಗೀಶ್ ಮಾಂಡೋವಿ ಮೋಟಾರ್ಸ್-ಸುರೇಶ್ ಪಾದೆಬೆಟ್ಟುರವರಿಗೆ ನಗದು ರೂ.10,000 ದೊಂದಿಗೆ ಪ್ರಶಸ್ತಿ ವಿತರಿಸಲಾಯಿತು.

ಸ್ಥಳೀಯ ರಿಕ್ಷಾ ಚಾಲಕರಿಗಾಗಿ ಜೇಸಿಐ ವತಿಯಿಂದ ನಡೆಸಲಾದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ರಫಿಕ್ ತಂಡ(ಪ್ರಥಮ) ಮತ್ತು ಸುದರ್ಶನ್ ತಂಡ(ದ್ವಿತೀಯ)ಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಕೆಪಿಸಿಸಿ ಸದಸ್ಯ ನವೀನ್‍ಚಂದ್ರ ಜೆ.ಶೆಟ್ಟಿ, ಜೇಸಿಐ ವಲಯ 15ರ ಕಾರ್ಯಕ್ರಮ ನಿರ್ದೇಶಕ ರಾಘವೇಂದ್ರ ಹೊಳ್ಳ ಮುಖ್ಯ ಅತಿಥಿಗಳಾಗಿದ್ದರು.

ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಈ ಸಂದರ್ಭ ಅನಿಲ್ ಶೆಟ್ಟಿಯವರು ಜೇಸಿಐ ಪಡುಬಿದ್ರಿಯ ಎಲ್ಲಾ ಪೂರ್ವಾಧ್ಯಕ್ಷರುಗಳನ್ನು ಗೌರವಿಸಿದರು.

ಜೇಸಿಐ ವಲಯ ಉಪಾಧ್ಯಕ್ಷ ಮಕರಂದ್ ಸಾಲ್ಯಾನ್, ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ, ಜ್ಯೂನಿಯರ್ ಜೇಸಿ ಅಧ್ಯಕ್ಷೆ ಬ್ರಾಹ್ಮೀ ಹರೀಶ್, ಜೇಸೀಐ ಕೋಶಾಧಿಕಾರಿ ಪ್ರೀತಿ ಸುವರ್ಣ ಉಪಸ್ಥಿತರಿದ್ದರು.

ಸಪ್ತಾಹ ನಿರ್ದೇಶಕ ಮನೋಜ್ ಕುಮಾರ್ ವರದಿ ಮಂಡಿಸಿದರು. ಜಯ ಎಸ್.ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.

ಬಳಿಕ ಮಂಗಳೂರು ದೇವದಾಸ್ ಕಾಪಿಕಾಡ್‍ರವರ ಚಾ ಪರ್ಕ ಕಲಾವಿದರಿಂದ ಪುಷ್ಪಕ್ಕನ ಇಮಾನ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.