ನಾಟೆಕಲ್‍ನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ

ಮೂಲ್ಕಿ ಪೋಲೀಸರಿಂದ ತಡೆ-ಸಮುದಾಯ ಭವನಕ್ಕೆ ರವಾನೆ
ಮೂಲ್ಕಿ: ಮಂಗಳೂರಿನ ನಾಟೆಕಲ್‍ನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ 69 ಮಂದಿಯನ್ನು ಮೂಲ್ಕಿ ಪೋಲೀಸರು ಸಮುದಾಯ ಭವನಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಾಟೆಕಲ್‍ನಲ್ಲಿ ಗುತ್ತಿಗೆದಾರರೊಬ್ಬರ ಬಳಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರು ಲಾಕ್‍ಡೌನ್ ಆಗಿ 50 ದಿನ ಕಳೆದ ಬಳಿಕ ಆರ್ಥಿಕ ಮುಂಗಟ್ಟಿಗೊಳಗಾಗಿ ಮಂಗಳವಾರ ಮುಂಜಾನೆ ಕಾಲ್ನಡಿಗೆ ಮೂಲಕ ಮಧ್ಯಪ್ರದೇಶಕ್ಕೆ ತೆರಳಿದ್ದರು.
ಸಂಜೆ ವೇಳೆಗೆ ಮೂಲ್ಕಿ ತಲುಪಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಂದ ಮಾಹಿತಿ ಪಡೆದ ಪೋಲಿಸರು ಸಿಪಿಐ ಜಯರಾಮೇ ಗೌಡ ನೇತೃತ್ವದಲ್ಲಿ ಕಾರ್ಮಿಕರ ಮನವೊಲಿಸಿದರು. ಎಸ್‍ಐ ದೇಜಪ್ಪ ಹಾಗೂ ಸಿಬ್ಬಂದಿಗಳು ಕಾರ್ಮಿಕರ ಮನವೊಲಿಸಿ ಮೂಲ್ಕಿ ಸಮುದಾಯ ಭವನಕ್ಕೆ ಕರೆದೊಯ್ದಿದ್ದು, ಜಿಲ್ಲಾಡಳಿತ ಮೂಲಕ ಮಧ್ಯಪ್ರದೇಶಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.

ಇದಕ್ಕೆ ಮುನ್ನ ಸುಮಾರು 20 ಮಂದಿ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆಋಳುವ ಉದ್ದೇಶದೊಂದಿಗೆ ಮೂಲ್ಕಿ ಗಾಂಧಿ ಮೈದಾನಕ್ಕೆ ಆಗಮಿಸಿದ್ದರು. ತಹಶೀಲ್ದಾರ್ ಮಾಣಿಕ್ಯ ಎಮ್. ಮತ್ತು ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮುತುವರ್ಜಿ ವಹಿಸಿ ಅವರನ್ನು ಸಮುದಾಯ ಭವನದ ಗಂಜಿ ಕೇಂದ್ರಕ್ಕೆ ರವಾನಿಸಿದರು.

ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲೂ 50 ಕ್ಕೂ ಅಧಿಕ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳುವ ಉದ್ದೇಶದೊಂದಿಗೆ ಆಗಮಿಸಿದ್ದು, ಸಿಪಿಐ ಸುಬ್ಬಣ್ಣನವರು ಹೆಜಮಾಡಿಯಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಿದ್ದಾರೆ.