ಟ್ರಾವೆಲ್ ಹಿಸ್ಟರಿ ಇಲ್ಲದ ಸಹೋದರರಿಬ್ಬರಿಗೆ ಪಾಸಿಟಿವ್-ಮನೆ ಸೀಲ್ಡೌನ್

ಪಡುಬಿದ್ರಿ: ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಪಡುಬಿದ್ರಿಯ ನಡ್ಸಾಲಿನ(ಕನ್ನಂಗಾರು ಬೈಪಾಸ್ ಸಮೀಪ) ಸಹೋದರರಿಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಅವರ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಹೆಜಮಾಡಿಯಲ್ಲಿ ಅಂಗಡಿ ಹೊಂದಿರುವ 42 ಮತ್ತು 32 ವಯಸ್ಸಿನ ಸಹೋದರರಿಬ್ಬರಿಗೆ ಸೋಮವಾರ ಜ್ವರ ಹಾಗೂ ಉಬ್ಬಸ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರಲ್ಲಿಗೆ ಚಿಕಿತ್ಸೆಗೆ ತೆರಳಿದ್ದರು. ವೈದ್ಯರು ಅವರನ್ನು ಕೊರೊನಾ ಪರೀಕ್ಷೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಇಬ್ಬರಿಗು ಪಾಸಿಟಿವ್ ಬಂದಿದೆ.

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಅವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿದೆ. ಅವರಿದ್ದ ಅಂಗಡಿಗೂ ನೂರಾರು ಮಂದಿ ಬಂದು ಹೋಗಿದ್ದಾರೆ.

ಮಂಗಳವಾರ ಕಾಪು ಆರ್‍ಐ ರವಿಶಂಕರ್, ಪಡುಬಿದ್ರಿ ಪಿಡಿಒ ಪಂಚಾಕ್ಷರಿ ಹಿರೇಮಠ, ಗ್ರಾಮಕರಣಿಕ ಶ್ಯಾಮ್‍ಸುಂದರ್, ಪಡುಬಿದ್ರಿ ಎಎಸ್‍ಐ ದಿವಾಕರ್, ಹೆಡ್‍ಕಾನ್ಸ್‍ಟೇಬಲ್ ಯೋಗೀಶ್ ಅವರ ಮನೆಗೆ ಭೇಟಿ ನೀಡಿ ಸೀಲ್‍ಡೌನ್ ಮಾಡಿದ್ದಾರೆ. ಅವರ ಮನೆಯಲ್ಲಿ ನಾಲ್ವರಿದ್ದಾರೆ.