ಹೆಜಮಾಡಿಕೋಡಿಯ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಮನೆ ಸೀಲ್‍ಡೌನ್

ಪಡುಬಿದ್ರಿ: ಕೇರಳದ ಎರ್ನಾಕುಳಂಗೆ ಹೋಗಿ ಬಂದ ಹೆಜಮಾಡಿಕೋಡಿಯ 54 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಅವರ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಜೂನ್ 19ರಂದು ಔಷಧಿ ಖರೀದಿಗಾಗಿ ಎರ್ನಾಕುಳಂಗೆ ರೈಲಿನಲ್ಲಿ ಪ್ರಯಾಣಿಸಿ ಮರುದಿನ ರೈಲಿನಲ್ಲೇ ವಾಪಸಾಗಿದ್ದ ಹೆಜಮಾಡಿ ಕೋಡಿಯ ವ್ಯಕ್ತಿಗೆ ಮರುದಿನ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಗಂಟಲು ದ್ರವ ಪರಿಕ್ಷೆಗೆ ಕಳುಹಿಸಲಾಗಿದ್ದು, ಗುರುವಾರ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಹೆಜಮಾಡಿ ಗ್ರಾಮ ಕರಣಿಕ ಅರುಣ್ ಕುಮಾರ್, ಗ್ರಾಮ ಸಹಾಯಕ ಅಶೋಕ್, ಪಡುಬಿದ್ರಿ ಎಎಸ್‍ಐ ಗಂಗಾಧರ್, ಹೆಡ್‍ಕಾನ್ಸ್‍ಟೆಬಲ್ ಶೃತಿಕ್ ಶೆಟ್ಟಿ ಹೆಜಮಾಡಿ ಕೋಡಿಯ ಅವರ ಮನೆಗೆ ಆಗಮಿಸಿ 28ದಿನಗಳ ಸೀಲ್‍ಡೌನ್ ಮಾಡಿದ್ದಾರೆ. ಆ ಮನೆಯ ಅಕ್ಕಪಕ್ಕದಲ್ಲೇ ಹಲವು ಮನೆಗಳಿದ್ದು, ಎಚ್ಚರದಿಂದಿರುವಂತೆ ಅವರಿಗೆ ಸೂಚಿಸಲಾಗಿದೆ.
ಇದೇ ಸಂದರ್ಭ ವಿದೇಶದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಂದ ಹೆಜಮಾಡಿಯ ಇಬ್ಬರ ಎರಡು ಮನೆಗಳಿಗೂ ಸೀಲ್‍ಡೌನ್ ಮಾಡಲಾಗಿದೆ.