ಹೆಜಮಾಡಿ ಪಡುಬಿದ್ರಿಯಲ್ಲಿ ಕೊರೊನಾ ಅಬ್ಬರ – ಒಂದೇ ದಿನ 15 ಮಂದಿಗೆ ಸೋಕು

ಪಡುಬಿದ್ರಿ: ಹೆಜಮಾಡಿ ಮತ್ತು ಪಡುಬಿದ್ರಿಯಲ್ಲಿ 3-4 ದಿನದ ಹಿಂದೆ ಕೊರೊನಾ ಸೋಂಕು ತಗುಲಿದ ಎರಡು ಮನೆಯ 15 ಮಂದಿಗೆ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಎರಡು ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಹೆಜಮಾಡಿ ಕೋಡಿಯಲ್ಲಿ ಎರ್ನಾಕುಳಂಗೆ ಹೋಗಿ ಬಂದ 54 ವರ್ಷದ ವ್ಯಕ್ತಿಗೆ ಜ್ವರ ಬಂದ ಕಾರಣ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರನ್ನು ಮಣಿಪಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರವ ಸ್ಥಿತಿ ಗಂಭೀರವಿದೆ.

ಅವರ ಮನೆಯನ್ನು ಸೀಲ್‍ಡೌನ್ ಮಾಡಿದ್ದ ಸಂದರ್ಭ ಮನೆಯಲ್ಲಿ ಐವರು ಕುಟುಂಬಿಕರು ವಾಸವಿದ್ದರು. ಅದೇ ದಿನ ರಾತ್ರಿ ಹೆಜಮಾಡಿಕೋಡಿಯ ಮಸೀದಿ ಬಳಿಯ ಅವರ ಸಂಬಧಿಕರು ಐವರು ಸೀಲ್‍ಡೌನ್ ಆದ ಮನೆಗೆ ಬಂದು ವಾಸವಿದ್ದರು. ಮರುದಿನ ಆರೋಗ್ಯ ಇಲಾಖೆಯವರು ಮನೆಯವರ ಗಂಟಲು ದ್ರವ ಪಡೆಯಲು ತೆರಳಿದಾಗ ಮನೆಯಲ್ಲಿ 10 ಮಂದಿ ವಾಸವಿದ್ದು. ಆ ಕಾರಣದಿಂದ ಎಲ್ಲರ ಗಂಟಲು ದ್ರವ ಪಡೆಯಲಾಗಿತ್ತು. ಶನಿವಾರ ಎಲ್ಲಾ 10 ಮಂದಿಯ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರಥಮ ವ್ಯಕ್ತಿಯ ಸಂಪರ್ಕದಿಂದ ಅವರ ಮನೆಯ 45, 23, 33, 22, 32, ಮತ್ತು 56 ವರ್ಷಗಳ ಮಹಿಳೆಯರು, 27 ವರ್ಷದ ಪುರುಷ, 12 ವರ್ಷದ ಬಾಲಕಿ ಮತ್ತು ತಲಾ ಒಂದು ವರ್ಷಗಳ ಇಬ್ಬರು ಮಕ್ಕಳಿಗೆ ಸೋಕು ದೃಢಪಟ್ಟಿದೆ. ಇದೇ ಸಂದರ್ಭ ವ್ಯಕ್ತಿಯೊಂದಿಗೆ ಎರ್ನಾಕುಳಂಗೆ ರೈಲಿನಲ್ಲಿ ಹೋದ ಹೆಜಮಾಡಿ ಉತ್ತರ ಸುಲ್ತಾನ್ ರಸ್ತೆಯ 42 ವರ್ಷದ ವ್ಯಕ್ತಿ ಸ್ವಯಂಪ್ರೇರಣೆಯಿಂದ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅವರಿಗೂ ಸೋಂಕು ದೃಢಪಟ್ಟಿದೆ. ಹಾಗಾಗಿ ಅವರ ಮನೆ ಮತ್ತು ಕೋಡಿ ಮಸೀದಿ ಬಳಿಯ ಎರಡು ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಹೆಜಮಾಡಿಯಲ್ಲಿ ಒಮ್ಮೆಲೆ 15ಕ್ಕೂ ಅಧಿಕ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹೆದರಿದ ಹಲವರು ಈಗಾಗಲೇ ಮನೆ ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಪಡುಬಿದ್ರಿ ಕಣ್ಣಂಗಾರು ಬೈಪಾಸ್ ಬಳಿ ವಾರದ ಹಿಂದೆ ಇಬ್ಬರು ಸಹೋದರರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು ಅವರ ಮನೆಯಲ್ಲಿದ್ದ 60 ವರ್ಷದ ಪುರುಷ, 62 ಮತ್ತು 31 ವರ್ಷದ ಮಹಿಳೆಯರು ಮತ್ತು 1 ವರ್ಷ 7ತಿಂಗಳ ಮಗುವಿನ ಗಂಟಲು ಪರೀಕ್ಷೆ ವರದಿಯೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನೂ ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮನೆಯನ್ನೂ ಈಗಾಗಲೇ ಸೀಲ್‍ಡೌನ್ ಮಾಡಲಾಗಿತ್ತು.

ಸಂಪರ್ಕ ಮರೆಮಾಚಿದವರ ವಿರುದ್ಧ ಪ್ರಕರಣ: ಕುತೂಹಲವೆಂದರೆ ಈ ಎರಡೂ ಕುಟುಂಬಗಳು ಸಂಬಂಧಿರು. ಇವರೆಲ್ಲರಿಗೆ ಎಲ್ಲಿಂದ ಸೋಂಕು ಹರಡಿತು ಎಂಬುದು ನಿಗೂಢವಾಗಿದೆ. ಹೆಜಮಾಡಿ ಮಸೀದಿ ಬಳಿ ಅಂಗಡಿ ಹೊಂದಿರುವ ಸಹೋದರರಿಬ್ಬರ ಪ್ರವಾಸ ಮಾಹಿತಿ ತಿಳಿಯದೆ ಗೊಂದಲವುಂಟಾಗಿತ್ತು. ಜಿಲ್ಲಾಡಳಿತದ ವಿವಿಧ ಮೂಲಗಳಿಂದ ಮಾಹಿತಿ ಕೇಳಿದರೂ ಅವರು ಸುಳ್ಳು ಮಾಹಿತಿ ನೀಡಿದ್ದರು. ಬಳಿಕ ಅವರ ಮೊಬೈಲ್ ಕಾಂಟ್ಯಾಕ್ಟ್ ಮಾಹಿತಿ ಪಡೆದಾಗ ಅವರ ಪೈಕಿ ಒಬ್ಬಾತ ಬಂಟ್ವಾಳ, ಪಾಣೆಮಂಗಳೂರು, ಉಳ್ಳಾಲ ಸಹಿತ ಹಲವೆಡೆ ತಿರುಗಾಡಿದ್ದು ತಿಳಿದುಬಂದಿತ್ತು. ಇದರಿಂದ ಜಿಲ್ಲಾಡಳಿತಕ್ಕೆ ಸ್ಪಷ್ಟ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಅವರ ವಿರುದ್ಧ ಕೋವಿಡ್ ಪ್ರಕರಣ ದಾಖಲಿಸಿದ್ದಾರೆ. ತಪ್ಪು ಮಾಹಿತಿ ನೀಡಿದ ಕಾರಣ ಇವರ ಸಂಪರ್ಕಿತರನ್ನು ಪತ್ತೆ ಹಚ್ಚಲು ತೊಂದರೆಯಾಗಿದ್ದು ಈ ರೀತಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದ್ದು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಡಳಿತ ಕೋರಿದೆ.

ಪಲಿಮಾರು ಮಹಿಳೆಗೆ ಪಾಸಿಟಿವ್: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ಕೌನ್ಸಿಲರ್ ಆಗಿದ್ದ ಪಲಿಮಾರಿನ 33 ವರ್ಷದ ಮಹಿಳೆಗೆ ಕೊರೊನಾ ಸೋಕು ದೃಢವಾಗಿದೆ. ಅವರ ಪಲಿಮಾರಿನ ಮನೆ ವ್ಯಾಪ್ತಿಯ 3 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.