ಕಾರ್ಕಳ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್ – ಪಡುಬಿದ್ರಿ ಬಾದೆಟ್ಟು ಪ್ರದೇಶ ಸೀಲ್‍ಡೌನ್

ಪಡುಬಿದ್ರಿ: ಕಾರ್ಕಳದಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಪಡುಬಿದ್ರಿ(ನಡ್ಸಾಲು) ಪಡುಹಿತ್ಲುವಿನ ಬಾದೆಟ್ಟು ಮನೆಗೆ ಬಂದ ನಾಲ್ವರಿಗೆ ಸೋಮವಾರ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಟಿಎಂಎ ಪೈ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈಯಿಂದ ಬಂದ ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಕ್ವಾರೆಂಟೈನ್‍ನಲ್ಲಿದ್ದಾಗ ಇವರ ಜತೆಗಿದ್ದ ಮಹಿಳೆಗೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದರೂ ಇವರನ್ನು ಕೊರೊನಾ ವರದಿ ಬರುವ ಮೊದಲೇ ಮನೆಗೆ ಕಳುಹಿಸಲಾಗಿತ್ತು.

ಇಂದು ಆಸ್ಪತ್ರೆಗೆ ದಾಖಲಾದವರಲ್ಲಿ 38ರ ಹರೆಯದ ಮಹಿಳೆ ಮತ್ತು 46,16 ಹಾಗೂ 40ರ ವಯೋಮಾನದ ಪುರುಷರು ಆಗಿದ್ದಾರೆ. ಇವರ ಜತೆಗಿದ್ದ ಮಹಿಳೆ ಈಗಾಗಲೇ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೂರು ವರ್ಷದ ಮಗು ಕೊರೊನಾ ನೆಗೆಟಿವ ಆಗಿದ್ದು ಆ ಮಗು ಮುಂಡ್ಕೂರಿನ ಅಜ್ಜಿ ಮನೆಯಲ್ಲಿದೆ.
ಕಾರ್ಕಳದಲ್ಲಿ ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ನಾಲ್ವರನ್ನು ಆಸುಪಾಸಿನ ಮನೆಯವರು ಹೊರಗಡೆ ತಿರುಗಾಡದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಹೊರಗೆಲ್ಲೂ ತೆರಳಿಲ್ಲ. ಅವರು ಬರುವ ಮುನ್ನ ಮನೆಯಲ್ಲಿ ಯಾರೂ ಇರಲಿಲ್ಲ. ಅವರ ಸಂಬಂಧಿಕರೊಬ್ಬರು ಅವರು ಬರುವ ಮುನ್ನವೇ ಆಹಾರ ಸಾಮಾಗ್ರಿಗಳನ್ನು ತಂದಿಟ್ಟು ತೆರಳಿದ್ದಾರೆ.

ಪಡುಬಿದ್ರಿಯ ಬಾದೆಟ್ಟು ಪ್ರದೇಶಕ್ಕೆ ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್, ಪಡುಬಿದ್ರಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಬಿ.ರಾವ್, ಪಡುಬಿದ್ರಿ ಪಿಎಸ್‍ಐ ಸುಬ್ಬಣ್ಣ ಹಾಗೂ ಸಿಬಂದಿಗಳು, ಕಾಪು ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್, ಹೆಜಮಾಡಿ ಗ್ರಾಮಲೆಕ್ಕಿಗ ಅರುಣ್ ಕುಮಾರ್ ಹಾಗೂ ಪಡುಬಿದ್ರಿ ಗ್ರಾಮಲೆಕ್ಕಿಗ ಶ್ಯಾಮ್‍ಸುಂದರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುತ್ತಲಿನ ನಾಲ್ಕೈದು ಮನೆಗಳನ್ನು ಒಳಗೊಂಡು ಸೀಲ್‍ಡೌನ್ ಮಾಡಿದ್ದಾರೆ.